
ದಕ್ಷಿಣ ಕನ್ನಡ ಜಿಲ್ಲೆಯ ಕುಲ್ಲಂಗಾಲು ನಿವಾಸಿ ಕೆ. ಮಾಧವ ಭಟ್ , ಸಾರ್ವಜನಿಕ ಉದ್ದೇಶಕ್ಕಾಗಿ ತಮ್ಮ ಸ್ವಂತ ಹಣದಲ್ಲಿ ಕೆರೆಯನ್ನು ನಿರ್ಮಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಅಂತರ್ಜಲ ಮಟ್ಟ ಹೆಚ್ಚಳದ ಬಗೆಗೆ ಪ್ರಸ್ತಾಪಿಸಿದ್ದರು. ಇದರಿಂದ ಪ್ರೇರಣೆಗೊಂಡ ಮಾಧವ ಭಟ್ ಅವರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ವ್ಯವಸ್ಥಿತವಾಗಿ ಕೆರೆ ನಿರ್ಮಿಸಿದ್ದಾರೆ.
ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ಕೆರೆಯ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಈ ಕೆರೆ 1 ಕೋಟಿ 75 ಲಕ್ಷ ಲೀಟರ್ ಸಂಗ್ರಹಸಿಟ್ಟುಕೊಳ್ಳುವ ನೀರಿನ ಸಾಮರ್ಥ್ಯ ಹೊಂದಿದೆ. ಈ ಕೆರೆಯು ಸುತ್ತಮುತ್ತಲಿನ ಜನರಿಗೆ ಕುಡಿಯುವ ನೀರು, ರೈತರು, ಕೃಷಿ ಚಟುವಟಿಕೆಗಳಿಗೆ, ಜಾನುವಾರುಗಳಿಗೆ ಹಾಗೂ ಪ್ರಾಣಿ-ಪಕ್ಷಿಗಳಿಗೆ ಸಹಕಾರಿಯಾಗಲಿದೆ.
ಈ ಕುರಿತು ಮಾತನಾಡಿದ ಮಾಧವ ಭಟ್ ಅವರು, ಕೆರೆ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಮಳೆಗಾಲದಲ್ಲಿ ಕೆರೆಯಲ್ಲಿ ನೀರು ಶೇಖರಣೆಯಾಗುವುದರಿಂದ ಸುತ್ತಮುತ್ತಲಿನ ಬಾವಿಗಳಲ್ಲಿ ಅಂತರ್ಜಲ ಪ್ರಮಾಣ ಏರಿಕೆಯಾಗಲಿದೆ. ಅಲ್ಲದೆ ಬೇಸಿಗೆ ಕಾಲದಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರಿನ ಮೂಲವೂ ದೊರೆತಂತಾಗುತ್ತದೆ ಎಂದರು.