
ನಮ್ಮ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅನೇಕರು ಯತ್ನಿಸಿ ವಿಫಲರಾಗಿದ್ದಾರೆ ಹಾಗೂ ಮತ್ತೆ ಕೆಲವರು ಯಶಸ್ವಿ ಕೂಡ ಆಗಿದ್ದಾರೆ. ಇದೇ ಹಾದಿಯಲ್ಲಿರುವ ಇನ್ನೊಂದು ಹೋರಾಟವೇ ‘ಕೃಷಿ ಮಸೂದೆ ವಿರೋಧಿಸಿ ರೈತರ ಮುಖವಾಡ ಧರಿಸಿದವರು ಮಾಡುತ್ತಿರುವ ಹೋರಾಟ’. ರೈತರ ಪರ ಎಂದು ಹೇಳಿಕೊಂಡು ಯಾವುದಾದರೂ ಹೋರಾಟ ಶುರು ಮಾಡಿದರೆ ಅದಕ್ಕೆ ಬಹುಪಾಲು ಜನರ ಬೆಂಬಲವಂತೂ ಭಾರತದಂತಹ ಕೃಷಿ ಪ್ರಧಾನ ದೇಶದಲ್ಲಿ ಸಿಕ್ಕೇ ಸಿಗುತ್ತದೆ. ಹೀಗೆಯೇ ಶುರುವಾಗಿದ್ದು ಕೇಂದ್ರ ಸರಕಾರ ತಂದ ಕೃಷಿ ಕಾಯಿದೆ ವಿರೋಧಿಸಿ ನಡೆಯುತ್ತಿರುವ ಹೋರಾಟ. ‘ಅರೇ, ರೈತರು ಬೀದಿಯಲ್ಲಿದ್ದಾರೆ ನೀನು ಬೆಂಬಲಿಸುವುದಿಲ್ಲವೇ?!’ ಎಂದು ಯಾರಾದರೂ ನಮ್ಮನ್ನು ಕೇಳಿದರೆ ಇಲ್ಲ ಎನ್ನಲು ನಮಗೆ ಆ ಕ್ಷಣಕ್ಕೆ ಸಾಧ್ಯವಿಲ್ಲ. ಏಕೆಂದರೆ ರೈತನಿಗೆ ಒಂದು ವಿಶೇಷ ಸ್ಥಾನವನ್ನು ನಮ್ಮ ಮನಸ್ಸಿನಲ್ಲಿ ನಾವು ನೀಡಿದ್ದೇವೆ.
ಈ ಕೃಷಿ ಮಸೂದೆ ವಿರೋಧಿ ಹೋರಾಟದ ಮೂಲ ಉದ್ದೇಶವೇ ಬೇರೆಯಿತ್ತು ಎಂದು ದೇಶದ ಜನತೆಗೆ ಬಹುಬೇಗನೇ ತಿಳಿದು ಹೋಯಿತು. ಆದರೆ ಈ ಸುಳ್ಳು ಹೋರಾಟ, ಟೂಲ್ ಕಿಟ್, ದೇಶವಿರೋಧಿ ಚಟುವಟಿಕೆಗಳ ನಡುವೆ ನಾವೆಷ್ಟು ಜನ ‘ಕೃಷಿ ಕಾಯಿದೆಯ’ ಒಳ ಹೊರವನ್ನು ಅರಿತಿದ್ದೇವೆ? ಮೋದಿಯವರು ಜಾರಿಗೆ ತಂದರೆಂದರೆ ಎಲ್ಲವೂ ಸರಿಯೇ? ಈ ಕಾನೂನಿನಲ್ಲಿ ಏನೂ ಲೋಪ ದೋಷಗಳಿಲ್ಲವೇ? ರೈತರ ವಿರೋಧ ಯಾವ ವಿಷಯಕ್ಕೆ? ಯಾಕೆ ಪಂಜಾಬ್ ಮತ್ತು ಹರಿಯಾಣ ರೈತರು ಬಿಗಿ ಪಟ್ಟು ಹಿಡಿದು ಕೂತಿದ್ದಾರೆ?ಪಂಜಾಬ್ ನ ‘ಆರ್ಥಿಯಾಸ್’ ಅಲ್ಲಿನ ರೈತರನ್ನು ಹೇಗೆ ನಿಯಂತ್ರಿಸುತ್ತಿದ್ದಾರೆ? ಹೊಸ ಕೃಷಿ ಕಾಯಿದೆಯಲ್ಲಿ ‘ಎಫ್ ಪಿ ಓ’ ಗಳ ಪಾತ್ರವೇನು? ಎ ಪಿ ಎಂ ಸಿ ಗಳು ರಾಜಕೀಯ ಪುಢಾರಿಗಳ ತಾಣವಾಗಿ ಬದಲಾಗಿದ್ದು ಹೇಗೆ? ಎಂ ಎಸ್ ಪಿ ಎಷ್ಟು ಪರಿಣಾಮಕಾರಿಯಾಗಿದೆ? ಹೊಸ ಕೃಷಿ ಕಾಯಿದೆಗಳಲ್ಲಿ ಎಂ ಎಸ್ ಪಿಗೆ ಪ್ರಾಮುಖ್ಯತೆ ಇಲ್ಲವೇ? ಕೃಷಿ ಅರ್ಥಶಾಸ್ತ್ರಜ್ಞ ಪ್ರೊಫೆಸರ್ ಅಶೋಕ್ ಗುಲಾಟಿ ಈ ಕಾಯಿದೆಯ ಬಗ್ಗೆ ಏನನ್ನುತ್ತಾರೆ? ಹೊಸ ಕೃಷಿ ಕಾಯಿದೆ ಏಕೆ ಬೇಕು? ಹೀಗೆ ಹತ್ತು ಹಲವು ಪ್ರಶ್ನೆಗಳು ನಿಮಗೂ ಮೂಡಿರಬೇಕಲ್ಲವೇ? ಹೀಗೆ ಮೂಡುವ ಹಲವು ಪ್ರಶ್ನೆಗಳಿಗೆ ಉತ್ತರ ಒದಗಿಸುವ ಪುಸ್ತಕವೊಂದು ಕನ್ನಡಲ್ಲಿ ಬಿಡುಗಡೆಯಾಗಿದೆ.ಅದೇ ವಿಜಯ ಕರ್ನಾಟಕದ ಕೇಶವ ಪ್ರಸಾದ್ ಬಿ ಅವರು ಬರೆದಿರುವ ‘ ಕೃಷಿ ಕಾಯಿದೆ 2020, ಏನು..ಏಕೆ.. ಹೇಗೆ?’ ಎಂಬ ಪುಸ್ತಕ .ಈ ಪುಸ್ತಕದಲ್ಲಿ ಅವರು ಕೃಷಿ ಕಾಯಿದೆಗಳ ಸಂಪೂರ್ಣ ಒಳ ಹೊರವನ್ನು ಸರಳವಾಗಿ ವಿವರಿಸುವುದರ ಜೊತೆಗೆ ಕೃಷಿ ಕಾಯಿದೆ ವಿರೋಧಿಸಿ ನಡೆಸುತ್ತಿರುವ ಹೋರಾಟದ ಹಿಂದಿನ ಮರ್ಮವನ್ನೂ ತಿಳಿಸಿದ್ದಾರೆ. ಕೇಶವ ಪ್ರಸಾದರ ‘ಮೇಕಿಂಗ್ ಇಂಡಿಯಾ’ ಅಂಕಣ ಮತ್ತು ಅನೇಕ ಬರಹಗಳ ಖಾಯಂ ಓದುಗಾರನಾದ ನನಗೆ ಅವರು ಈ ಕೃತಿ ಬರೆಯುತ್ತಿದ್ದೇನೆ ಎಂದು ಹೇಳಿದಾಗ ಖುಷಿಯ ಜೊತೆಗೆ ಕಾತರತೆ ಕೂಡ ಜಾಸ್ತಿಯಾಗಿತ್ತು. ನಿಜಕ್ಕೂ ಈ ಪುಸ್ತಕವನ್ನು ಅದ್ಭುತವಾಗಿ ಬರೆದ ಕೇಶವ ಪ್ರಸಾದ್ ಅವರು ನಿರೀಕ್ಷೆಯನ್ನಂತೂ ಹುಸಿಗೊಳಿಸಲಿಲ್ಲ.
1991 ರಲ್ಲಿ ಮನಮೋಹನ ಸಿಂಗ್ ಅವರ ನೇತೃತ್ವದಲ್ಲಿ ಬಂದ ಉದಾರೀಕರಣ ನೀತಿಗೆ ಈ ಕೃಷಿ ಕಾಯಿದೆಗಳನ್ನು ಏಕೆ ಹೋಲಿಸಬಾರದು? ಇದು ಕೂಡ ಅಂತಹ ಐತಿಹಾಸಿಕ ನಿರ್ಧಾರವೇ ಅಲ್ಲವೇ ?ಇದು ಯಾಕೆ ಐತಿಹಾಸಿಕ ನಿರ್ಧಾರ? ತಿಳಿಯಬೇಕೆಂದರೆ ಈ ಪುಸ್ತಕ ಓದಿ. ಪುಸ್ತಕ ಓದಿ ಮುಗಿಸಿದ ಮೇಲೆ ನನಗನ್ನಿಸಿದ್ದು ಮೋದಿಯವರು ಜಾರಿಗೆ ತಂದ ಈ ಕಾಯಿದೆ ಐತಿಹಾಸಿಕವೇ ಸೈ.ಈ ಕಾಯಿದೆ ವಿರೋಧಿ ಹೋರಾಟಗಾರ ಪ್ರಕಾರ ರೈತ ಖಾಸಗಿ ಕಂಪನಿಗಳ ಗುಲಾಮನಾಗುತ್ತಾನೆ ಆದರೆ ಈ ವಾದದಲ್ಲಿ ಹುರುಳಿಲ್ಲ ಏಕೆಂದರೆ ಈ ಹೊಸ ಕೃಷಿ ಕಾಯಿದೆಗಳು ರೈತನಿಗೆ ಒಂದು ಆಯ್ಕೆಯೇ ಹೊರತು ಇದರ ಪ್ರಕಾರ ಮಾತ್ರ ರೈತ ನಡೆದುಕೊಳ್ಳಬೇಕು ಎಂದೇನಿಲ್ಲ. ಕೃಷಿ ಕಾಯಿದೆಗಳ ಬಗ್ಗೆ ಚರ್ಚೆಯೇ ನಡೆದಿಲ್ಲ ಎನ್ನುವವರೇ, 2002 ರಿಂದ ಹೊಸ ಕೃಷಿ ನೀತಿಯ ಬಗ್ಗೆ ವಿವಿಧ ಸ್ತರಗಳಲ್ಲಿ ನಡೆದಿದ್ದು ಚರ್ಚೆಯಲ್ಲವೇ? ಅನೇಕ ಕೃಷಿ ಅರ್ಥ ಶಾಸ್ತ್ರಜ್ಞರು ಈ ಹೊಸ ಕಾಯಿದೆಯನ್ನು ಸುಮ್ಮನೇ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಅವರಲ್ಲಿ ಅನೇಕರು ಹೊಸ ಕಾಯಿದೆಯ ಅನುಕೂಲತೆಗಳ ಬಗ್ಗೆ ಒಳ್ಳೆಯ ವಾದವನ್ನು ಮುಂದಿಟ್ಟಿದ್ದಾರೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ರೈತನಿಗೆ ತನ್ನ ಬೆಳೆಯನ್ನು ಎಲ್ಲಿ ಬೇಕಾದರೂ ಮಾರುವ ಅಧಿಕಾರ ನೀಡುತ್ತೇವೆ ಎಂದು 2019 ರ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಮರೆಯಲು ಸಾಧ್ಯವೇ? ಶರದ್ ಪವಾರ್ ಕೃಷಿ ಸಚಿವರಾಗಿದ್ದಾಗ ಎಲ್ಲ ರಾಜ್ಯಗಳಿಗೆ ಬರೆದ ಪತ್ರವ ಮರೆಯಲು ಸಾಧ್ಯವೇ? ಇದೆ ರಾಕೇಶ್ ಟಿಕಾಯತ್ ನ ಭಾರತೀಯ ಕಿಸಾನ್ ಯೂನಿಯನ್ 2019 ರ ಚುನಾವಣಾ ಪ್ರಣಾಳಿಕೆಯ ಏನು ಭರವಸೆ ನೀಡಿತ್ತು? ನೀವದನ್ನು ಓದಿದರೆ ನಿಜಕ್ಕೂ ಗಾಬರಿಯಾಗುತ್ತೀರಿ. ಈ ಎಲ್ಲ ವಿರೋಧ ಪಕ್ಷಗಳ ದ್ವಂದ್ವ ನಿಲುವುಗಳ ಬಗ್ಗೆ ತಿಳಿಯಬೇಕೆಂದರೆ ಒಮ್ಮೆ ಈ ಪುಸ್ತಕ ಓದಿ.

ದೇಶದ ಶೇಖಡಾ 50 ಕ್ಕೂ ಅಧಿಕ ಜನರಿಗೆ ಕೆಲಸ ನೀಡಿರುವ ಹೆಮ್ಮೆಯ ಕೃಷಿ ಕ್ಷೇತ್ರ ಜಿಡಿಪಿ ಗೆ ನೀಡುತ್ತಿರುವ ಕೊಡುಗೆ ಕೇವಲ ಶೇಖಡಾ 17 ಅಂದರೆ ಆಶ್ಚರ್ಯವಾಗಲೇಬೇಕಲ್ಲವೇ ? ಹೌದು ಈಗ ಕೃಷಿಯೊಂದು ಮಾಡರ್ನ್ ಇಂಡಸ್ಟ್ರೀ. ಈ ಕೃಷಿಗೀಗ ಹೊಸತನದ ಅವಶ್ಯಕತೆಯಿದೆ, ರೈತ ಸಾಲದಿಂದ ಹೊರಬರಬೇಕಿದೆ. ಕೃಷಿಯಲ್ಲಿನ ಹೊಸತನಕ್ಕೆ ರೈತ ಹೊರಳಬೇಕಾದರೆ ಹೊಸ ಹೊಸ ತಂತ್ರಜ್ಞಾನದ ಅಳವಡಿಕೆಯಾಗಬೇಕಿದೆ. ಹೌದು! Aggriculture needs sophisticated technical knowhow. ಸೋಶಿಯಲಿಸಮ್ ಹೆಸರಲ್ಲಿ ರೈತರನ್ನು ಹೆದರಿಸುವ ಸಂಘಟನೆಗಳಿಂದ ರೈತರು ದೂರವಿರಬೇಕಿದೆ. ದೇಶದ ರೈತರು ಶ್ರೀಮಂತರಾಗಬೇಕು ಮತ್ತು ಸ್ವಾವಲಂಬಿಗಳಾಗಬೇಕೆಂದರೆ ಇಂತಹ ಕಾನೂನುಗಳ ಅವಶ್ಯಕತೆಯಿದೆ. ಈ ಕಾನೂನನ್ನು ಬಹುಪಾಲು ರೈತರು ಒಪ್ಪಲು ಕೂಡ ಇದೇ ಕಾರಣ. ಕನ್ನಡದಲ್ಲಿ ಬಹುಶಃ ಇಂತಹ ಇನ್ನೊಂದು ಕೃತಿ ಬಂದಿರಲಿಕ್ಕಿಲ್ಲ ಇದನ್ನು ನಾವೆಲ್ಲ ಓದಬೇಕು, ಹೊಸ ಕೃಷಿ ಕಾಯಿದೆಯ ಮೂಲ ಆಶಯಗಳನ್ನು ತಿಳಿದುಕೊಳ್ಳಬೇಕು ಮತ್ತು ಇತರರಿಗೂ ಹಂಚಬೇಕು. ಈ ಪುಸ್ತಕವನ್ನು ಬರೆದು ಕನ್ನಡಿಗರಿಗೊಪ್ಪಿಸಿದ ಕೇಶವ ಪ್ರಸಾದ್ ಬಿ. ಅವರಿಗೆ ಹಾಗೂ ಪ್ರಕಾಶಕರಾದ ಸ್ನೇಹ ಬುಕ್ ಹೌಸ್ ನವರಿಗೆ ನನ್ನ ಅನಂತ ಧನ್ಯವಾದವನ್ನು ಈ ಮೂಲಕ ತಿಳಿಸುತ್ತೇನೆ.