Quantcast
Channel: Samvada
Viewing all articles
Browse latest Browse all 3435

ಶ್ರೀರಾಮ ವಿಶ್ವವಂದಿತ; ಭಾರತದ ಅಸ್ಮಿತೆಯ ಪ್ರತೀಕ

$
0
0

ರಾವಣನ ಅಟ್ಟಹಾಸ ಕೇಳಿ ನಡುಗುತ್ತಿದ್ದ ಸಮಾಜದ ಜನರಿಗೆ ಭರವಸೆಯ ಹೊಸ ಮಿಂಚೊಂದು ಕಾಣಿಸಿತು. “ಕೇವಲ ಹದಿಮೂರು ವಯಸ್ಸಿನ ಹುಡುಗನೊಬ್ಬ ಆಗಲೇ ಭಯಾನಕ ತಾಟಕಿಯ ಸಂಹಾರ ಮಾಡಿದನಂತೆ! ದುಷ್ಟ ಸುಬಾಹುವನ್ನು ಕೊಂದನಂತೆ!   ರಾವಣನ ಬಗ್ಗೆ ತಲೆ ಕೆಡಿಸಿಕೊಳ್ಳದಿರಿ ಆ ರಾಕ್ಷಸನ ಹುಟ್ಟಡಗಿಸಲು ಪುರುಷೋತ್ತಮನೊಬ್ಬ ಬಂದಿದ್ದಾನೆ! ಅನ್ನುವ ಸಂದೇಶ ಜಗತ್ತಿನೆಲ್ಲೆಡೆ ಆತ್ಮವಿಶ್ವಾಸವನ್ನು ಮೂಡಿಸಿತು. ಆ ವಿಶ್ವಾಸಕ್ಕೆ ಕಾರಣನಾಗಿದ್ದು ಮರ್ಯಾದಾ ಪುರುಷೋತ್ತಮ ಶ್ರೀರಾಮ.

 “ಸ್ಥೆೃರ್ಯೇಣ ಹಿಮವಾನಿವ” ಅನ್ನುತ್ತಾ ವಾಲ್ಮೀಕಿ ಮಹರ್ಷಿಗಳು ಶ್ರೀರಾಮನ ಧೈರ್ಯವನ್ನು ಹಿಮಾಲಯಕ್ಕೆ ಹೋಲಿಸಿದ್ದರು. ಕಷ್ಟಗಳಿಗೆ ಎದೆಕೊಡುವ ಆದರ್ಶಕ್ಕೆ ಬಹುಷಃ  ರಾಮನಿಗಿಂತ ಸೂಕ್ತ ಮತ್ತೊಂದು ವ್ಯಕ್ತಿತ್ವ ಇಲ್ಲವೆಂದೆನಿಸುತ್ತದೆ.

ದಶರಥ ಮಹಾರಾಜ ಪುರಜನರ ಅಭಿಪ್ರಾಯವನ್ನು ಪಡೆದು ನಾಳೆಯೇ ಶ್ರೀರಾಮನಿಗೆ ಪಟ್ಟಾಭಿಷೇಕ ಎಂದು ಘೋಷಿಸಿದ್ದಾರೆ. ರಾಮನಿಗೂ ಈ ವಿಚಾರ ತಿಳಿಸಿ, ರಾಜನಾದವನು ಪಾಲಿಸಬೇಕಾದ ಪ್ರಮುಖ ವಿಧಿಗಳ ಬಗ್ಗೆ ಸುಪುತ್ರನಿಗೆ ತಿಳಿಸುತ್ತಿದ್ದಾರೆ. ಊರು ಶೃಂಗಾರಗೊಳ್ಳುತ್ತಿದೆ. ಸಂಭ್ರಮ ಕ್ಷಣಗಳ ಕಣ್ತುಂಬಿಕೊಳ್ಳಲು ಪುರಜನರು ತುದಿಗಾಲಲ್ಲಿ ನಿಂತಿದ್ದಾರೆ.

ಇನ್ನು ಕೆಲ ಕ್ಷಣಗಳು ಕಳೆದರೆ ಶ್ರೀರಾಮನ ಪಟ್ಟಾಭಿಷೇಕ, ಶ್ರೀರಾಮಚಂದ್ರ ಅಯೋಧ್ಯೆಯನ್ನು ಆಳುವ ದೊರೆ.. ಆದರೆ ವಾತಾವರಣದಲ್ಲಿ ಮೋಡ ಕವಿಯಿತು. ಅಕಾಲದಲ್ಲಿ ಮಳೆ ಬರುವ ಸೂಚನೆಯದು.     ರಾಮನಿಗೆ ಪಟ್ಟಾಭಿಷೇಕ ನಡೆಯುವುದಿಲ್ಲವಂತೆ! ರಾಮ ಕಾಡಿಗೆ ಹೋಗಬೇಕಂತೆ, ವನವಾಸಕ್ಕೆ!

 ಸಂಭ್ರಮದಲ್ಲಿದ್ದ ಅಯೋಧ್ಯೆಯಲ್ಲಿ ಸೂತಕದ ಛಾಯೆ.     ರಾಮ, ಸೀತೆ ಲಕ್ಷ್ಮಣರ ಜೊತೆ ಹೊರಟು ನಿಂತಿದ್ದಾನೆ. ಜನರ ಕಣ್ಣೀರೇ ಸರಯೂ ಮೂಲಕ ತುಂಬಿ ಹರಿಯುತ್ತಿದೆಯೇನೋ ಅನಿಸುವಂತೆ ಭಾಸವಾಗುತ್ತಿದೆ. ಆದರೆ … ಶ್ರೀರಾಮ ಸ್ಥಿತಪ್ರಜ್ಞ. ಅವನ ಮುಖದಲ್ಲಿ ಯಾವುದೇ ದುಃಖದ ಛಾಯೆ ಇಲ್ಲ! ನಿನಗೆ ನಾಳೆ ಪಟ್ಟಾಭಿಷೇಕ ಅಂದಾಗ ಅವನ ಮನಸ್ಸಿನ ಭಾವ ಹೇಗಿತ್ತೋ, ನೀನೀಗಲೆ ಕಾಡಿಗೆ ಹೊರಡಬೇಕು ಅಂದಾಗಲೂ ಅವನು ಹಾಗೇಯೇ ಇದ್ದ. ರಾಮನ ಧೈರ್ಯ ಮಾತ್ರವಲ್ಲ ಆತ್ಮಸ್ಥೈರ್ಯವೂ ಹಿಮಾಲಯದಂತೆ ಅಚಲ.

ಯಕಶ್ಚಿತ್ ಕಾರಣಗಳಿಗೆ ಕುಸಿದುಬೀಳುವ ದುರ್ಬಲ ಮನಸ್ಸುಗಳಿಗೆ ರಾಮಕಥೆ ಸಂಜೀವಿನಿ. ರಾಜ್ಯ ಕಳೆದುಕೊಂಡಾಗಲೂ ವಿಚಲಿತನಾಗಲಿಲ್ಲ, ಕಷ್ಟದ ದಿನಗಳಲ್ಲೂ ಕರ್ತವ್ಯ ಮರೆಯಲಿಲ್ಲ. ಶಾಂತ ಮನಸ್ಥಿತಿಯನ್ನು ಕಳೆದುಕೊಳ್ಳಲಿಲ್ಲ. ಶ್ರೀರಾಮನ ವ್ಯಕ್ತಿತ್ವ ಬೆಳಕಾಗಿ ಒದಗುವುದು ಈ ಕಾರಣ ಗಳಿಗಾಗಿ.

ಮುಂಜಾವಿನಲ್ಲಿ ”ಸೀತೆ ಬೇಗ ಹೊರಡೋಣ” ಅನ್ನುತ್ತಾ ಶ್ರೀರಾಮ ಅವಿಶಹ್ಯಾತಪೋ ಯಾವತ್ ಸೂರ್ಯೋನಾತಿ ವಿರಾಜತೇ, ಅಮಾರ್ಗೇಣ ಆಗತಾಂ ಲಕ್ಷ್ಮೀಂ ಪ್ರಾಪೇವ ಅನ್ವಯ ವರ್ಜಿತಃ ಅನ್ನುತ್ತಾನೆ. ಸೂರ್ಯ ತನ್ನ ತಾಪವನ್ನು ಬೀರುವ ಮೊದಲೇ ಹೊರಡೋಣ ಅಂತ ಹೇಳಿಬಿಡಬಹುದಿತ್ತು. ಆದರೆ  ಮುಂದುವರಿಸ್ಕೊಂಡು ‘ದುರ್ಮಾರ್ಗದಿಂದ ಪಡೆದ ಹಣದಿಂದ ಬೀಗುವ ಕುಲಹೀನನಂತೆ ಸೂರ್ಯ ಕೂಡ ತಾಪ ಕೊಡುತ್ತಾನೆ” ಅನ್ನುವ ರೂಪಕವನ್ನು ಜೋಡಿಸಿ, ಪುಟ್ಟದೊಂದು ಸಂಗತಿಯಲ್ಲೂ ಮಹಾನ್ ಚಿಂತನೆಯೊಂದನ್ನು ವಾಲ್ಮೀಕಿಗಳ ಮೂಲಕ ಶ್ರೀರಾಮ ನಮಗೆ ತಲುಪಿಸುತ್ತಾನೆ

ರಾವಣನಿಂದ ಸೀತೆಯ ಅಪಹರಣದ ಸುದ್ದಿ ತಿಳಿಸಿ ತನ್ನ ಕಣ್ಣೆದುರಲ್ಲಿ ಮರಣಿಸಿದ ಜಟಾಯು ಕೇವಲ ಪಕ್ಷಿಯಾಗಿ ಕಾಣಲಿಲ್ಲ ಶ್ರೀರಾಮನಿಗೆ. ಆ  ಪಕ್ಷಿ ತನ್ನ ತಂದೆಗೆ ಸಮಾನ ಎಂದು ಭಾವಿಸಿ ಪಿತೃಮೇಧ ಅನ್ನುವ ಮಂತ್ರದಿಂದ  ಜಟಾಯುವಿನ ಪಿತೃಶ್ರಾದ್ಧವನ್ನು ಮಾಡುತ್ತಾನೆ ರಾಮ

ಈ ಸೃಷ್ಟಿಯಲ್ಲಿರುವ ಪ್ರತಿಯೊಂದೂ ಜೀವಿಯೂ ಅದು ಭಗವಂತನ ಅಂಶ ಎಂಬ ತತ್ತ್ವ ಇಲ್ಲಿ ನಮಗೆ ವೇದ್ಯವಾಗುತ್ತದೆ.

ಪುಟ್ಟ ಅಳಿಲು ಸೇತುವೆ ಕಟ್ಟುವಾಗ ತನ್ನ ಒದ್ದೆ ಮೈಗೆ ಅಂಟಿಕೊಂಡ ಮರಳ ಕಣಗಳನ್ನು ಉದುರಿಸಿ ಬರುವುದನ್ನು ನೋಡಿದ ಶ್ರೀರಾಮ, ಪ್ರೀತಿಯಿಂದ ಅದರ ಬೆನ್ನ ಮೇಲೆ ಕೈಯಾಡಿಸುತ್ತಾನೆ. ಇಲ್ಲಿ ಅಳಿಲು ಮಾಡಿದ ಕಾರ್ಯ ಯಾರಿಗಿಂತಲೂ ಕಡಿಮೆಯದ್ದಲ್ಲ. ತನಗೆ ಇರುವ ಅಷ್ಟೂ ಶಕ್ತಿಯನ್ನು ಉಪಯೋಗಿಸಿ ಅಳಿಲು ತನ್ನ ಕಾರ್ಯ ಮಾಡುತ್ತಿತ್ತು ಅನ್ನುವುದನ್ನು ಗಮನಿಸಬೇಕು. ಪುಟ್ಟ ಅಳಿಲನ್ನು ಒಬ್ಬ ವಾನರ ತುಳಿದರೆ ಅಳಿಲು ಸತ್ತೇ ಹೋಗುತ್ತದೆ. ಒಂದು ಪುಟ್ಟ ಕಲ್ಲು ಬಿದ್ದರೂ ಅಳಿಲು ತನ್ನ ಪ್ರಾಣಬಿಡಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲೂ ಎದೆಗುಂದದೆ ತನ್ನ ಕಸುವೆಲ್ಲ ವನ್ನು ಬಳಸಿ ರಾಮನ ಸೇವೆಗೆ ನಿಲ್ಲುತ್ತದೆ ಆ ಪುಟ್ಟ ಇಣಚಿ. ಅದು ನಿಜವಾದ ಅಳಿಲಸೇವೆ.

ತಾನು ಆನೆಯಂತೆ ದೇಹ ಬೆಳೆಸಿಕೊಂಡು ಕೇವಲ ಕಿರು ಬೆರಳಾಡಿಸಿ ‘ನನ್ನದು ಅಳಿಲಸೇವೆ’ ಅನ್ನುವ ಮಹಾನುಭಾವರಿಗೆ’ ಅಳಿಲ ಸೇವೆ ಯ ನಿಜಾರ್ಥವನ್ನು ಮನನ ಮಾಡಿಸಬೇಕಿದೆ.

ರಾವಣನ ಸಂಹಾರದ ಪ್ರಾಯಶ್ಚಿತ್ತಕ್ಕಾಗಿ ದೂರದ ಹಿಮಾಲಯದಲ್ಲಿ ತಾನು ಅಗಸ್ತ್ಯ ಋಷಿಗಳು ಗುಹೆಯೊಳಗೆ ಕೆಲಸಮಯ ತಪಸ್ಸು ಮಾಡುತ್ತೇನೆಂದು ಶ್ರೀರಾಮ ಹೇಳಿದಾಗ ಲಕ್ಷ್ಮಣನಿಗೆ ಆಶ್ಚರ್ಯವಾಗುತ್ತದೆ. “ಅಣ್ಣ ನೀನು ಕೊಂದಿರುವುದು ಒಬ್ಬ ಅಧರ್ಮಿಯನ್ನು,  ಅನಾಚಾರಿಯನ್ನು. ಆತ ಸೀತಾಮಾತೆಯನ್ನು ಅಪಹರಣ ಮಾಡಿದ ದುರಾಚಾರಿ. ಅಂಥ ರಾಕ್ಷಸನನ್ನು ಕೊಂದಿದ್ದಕ್ಕಾಗಿ ಪ್ರಾಯಶ್ಚಿತ್ತವೇ?”  ಆಗ ಶ್ರೀರಾಮ ಹೇಳುತ್ತಾನೆ ರಾವಣನಿಗೆ ಹತ್ತುತಲೆಗಳು.  ಅವನ 9ತಲೆಗಳಲ್ಲಿ ದುರಾಸೆ, ಅಸೂಯೆ, ಕಾಮ, ಮದ ಮುಂತಾದ ದುರ್ಗುಣಗಳೇ ತುಂಬಿತ್ತು. ಆದರೆ ಆತನೊಬ್ಬ ಧಾರ್ಮಿಕ, ಮಹಾನ್ ಶಿವಭಕ್ತ, ಪ್ರಖಾಂಡ ವಿದ್ವಾಂಸ, ಉದಾರ ಹೃದಯಿ ಆಗಿದ್ದ. ರಾವಣನನ್ನು ಕೊಲ್ಲಬೇಕಾದರೆ ಅವನ ಆ ಹತ್ತನೇ ತಲೆಯನ್ನೂ ತೆಗೆಯಬೇಕಾಯಿತು. ಹಾಗಾಗಿ ನಾನು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಅನ್ನುತ್ತಾನೆ ಶ್ರೀರಾಮ.

ಪ್ರತಿಯೊಬ್ಬ ಮನುಷ್ಯನಿಗೂ ಹತ್ತು ಹಲವಾರು ತಲೆಗಳಿವೆ. ಆದರೆ ಎಲ್ಲರಿಗೂ ಕನಿಷ್ಠ ತಲೆಯಲ್ಲಾದರೂ ಪ್ರೀತಿ ಕರುಣೆ ಔದಾರ್ಯ ಭಕ್ತಿ ಜ್ಞಾನ ಮುಂತಾದ ಅಮೂಲ್ಯ ಗುಣಗಳಿರುತ್ತವೆ. ‘ವ್ಯಕ್ತಿಯೊಬ್ಬನ ಗುಣವೊಂದನ್ನು ಟೀಕಿಸುವ ಬದಲು ವ್ಯಕ್ತಿಯನ್ನು ದೂಷಿಸುವುದು ತಪ್ಪು’ ಅನ್ನುವ ಸಂದೇಶವನ್ನು ರಾಮ ಈ ಮೂಲಕ ಸಾರುತ್ತಾನೆ.

ತನ್ನ ಹೆಂಡತಿಯನ್ನು ಅಪಹರಿಸಿದ ವ್ಯಕ್ತಿಯ ವಧೆಗಾಗಿ ಪ್ರಾಯಶ್ಚಿತ್ತ ಮಾಡಿಕೊಂಡ ರಾಮ, ರಾವಣನಲ್ಲಿ ಜ್ಞಾನಿಯನ್ನು ಶಿವಭಕ್ತನನ್ನು ಪರಾಕ್ರಮಿಯನ್ನು ಕಂಡ ಹಾಗಾಗಿ ಶ್ರೀರಾಮ ನಮಗೆ ಪೂಜ್ಯ ಆ ಕಾರಣಕ್ಕಾಗಿಯೇ ಹಿರಿಯರು ಹೇಳಿದ್ದು “ಶ್ರೀರಾಮ ನಡೆದಂತೆ ನಡೆ ಶ್ರೀಕೃಷ್ಣ ನುಡಿದಂತೆ ನಡೆ” ಎಂದು.

ಶ್ರೀರಾಮ ಭಾರತೀಯರಿಗೆ ಮಾತ್ರ ಆದರ್ಶಪ್ರಾಯನಾಗಿ ಉಳಿದಿಲ್ಲ. ಸಯಾಮ್ ಅಂದರೆ ಈಗಿನ ಥೈಲೆಂಡ್ನ  ಬ್ರಹತ್ ದೇವಸ್ಥಾನವೊಂದರಲ್ಲಿ ಸಂಪೂರ್ಣ ರಾಮಾಯಣದ ಕಥೆ ಚಿತ್ರಿತವಾಗಿದೆ. ಥಾಯ್ಲೆಂಡಿನ ಅರಸರು ತಮ್ಮನ್ನು ‘ರಾಮ’ನೆಂದು ಕರೆಸಿಕೊಳ್ಳುತ್ತಾರೆ ಅನ್ನುವ ಸಂಗತಿ ಬಹಳಷ್ಟು ಮಂದಿಗೆ ತಿಳಿದಿಲ್ಲ,  ಮಾತ್ರವಲ್ಲ ಬ್ಯಾಂಕಾಕ್ ಗೂ ಮುನ್ನ ರಾಜಧಾನಿಯಾಗಿದ್ದ ನಗರವನ್ನು ‘ಅಯೋಧ್ಯೆ’ ಅಂತ ಕರೀತಾ ಇದ್ರು

ಅಮೆರಿಕದ ಪೆರುವಿನಲ್ಲಿ ಈಗಲೂ ರಾಮಲೀಲಾ ಉತ್ಸವವನ್ನು ಆಚರಿಸುತ್ತಾರೆ. ಮುಸಲ್ಮಾನರೇ ಬಹುಸಂಖ್ಯಾತರಾಗಿರುವ ಇಂಡೋನೇಷಿಯಾದ ನೃತ್ಯನಾಟಕಗಳಿಗೆ ರಾಮನೇ ಮುಖ್ಯಪಾತ್ರ.  ರಾಮಾಯಣವೇ ಆಧಾರ.

ಜಗತ್ತಿನಲ್ಲಿ 3 ರಾಷ್ಟ್ರೀಯ ರಾಮಾಯಣ ನೃತ್ಯ ಮೇಳಗಳಿವೆ ಮತ್ತು ಅವು ಮೂರೂ ಭಾರತ ಬಿಟ್ಟು ಹೊರಗಿನ ದೇಶಗಳಲ್ಲಿದೆ ಅನ್ನುವುದು ವಿಶೇಷ. ಕಾಂಬೋಡಿಯಾ ಥಾಯ್ಲೆಂಡ್ ಹಾಗೂ ಇಂಡೋನೇಷಿಯಾ ಆ ಮೂರುವದೇಶಗಳು.

ಇಂಡೋನೇಷ್ಯ ಜನರಿಗೆ “ನೀವ್ಯಾಕೆ ರಾಮಾಯಣ ನಾಟಕ ಮಾಡುತ್ತೀರಿ?” ಅಂದಾಗ ಅವರು ಹೇಳುವುದು “ನಾವು ಪೂಜಾ ಪದ್ದತಿಯನ್ನು ಬದಲಾಯಿಸಿರಬಹುದು, ಆದರೆ ನಮ್ಮ ಪೂರ್ವಜರು ಮತ್ತು ಸಂಸ್ಕೃತಿಯನ್ನು ಬದಲಾಯಿಸಲು ಸಾಧ್ಯವೇ?! ಅಂದಾಗ ಯಾವ ಭಾರತೀಯನಿಗೂ ಆನಂದದ ಕಣ್ಣೀರು ಹರಿಯದಿರಲು ಸಾಧ್ಯವೇ ?

ಶ್ರೀರಾಮ ಜಗತ್ತಿನ ಜಡವಾಗಿರುವ ಭೂಭಾಗಗಳನ್ನು ಜಯಿಸಿದ್ದಲ್ಲ.. ಕೋಟಿಕೋಟಿ ಮಾನವರ ಹೃದಯಗಳನ್ನು.

ರಾಮನಾಮದ ಉಚ್ಛಾರದಿಂದ ದರೋಡೆಕೋರನಾಗಿದ್ದ ರತ್ಮಾಕರ ವಾಲ್ಮೀಕಿಯಾದ, ರಾಮಕಥೆ ತುಳಸೀದಾಸ, ಕಂಬ ರಂತಹ ಹಾಗೂ ಆಧುನಿಕ ಕಾಲದ ಕುವೆಂಪು ಡಿವಿಜಿ ಮೊದಲಾದ ಶ್ರೇಷ್ಠ ಕವಿ ಪುಂಗವರನ್ನೂ ಸಮಾಜಕ್ಕೆ ನೀಡಿತು.

ಭಾರತದ ಯಾವುದೇ ಊರುಗಳಿಗೆ ಹೋದರೂ “ಇಲ್ಲಿ ರಾಮ ಬಂದಿದ್ದ, ಇಲ್ಲೇ ಬೆಟ್ಟದ ಮೇಲೆ ಉಳಿದಿದ್ದ, ಅಲ್ಲೇ ಅಡುಗೆ ಮಾಡಿ ಊಟ ಮಾಡಿದ್ದ, ಆ ನದಿಯಲ್ಲಿ ಸ್ನಾನ ಮಾಡಿದ ಅನ್ನುವ ನೂರಾರು ಕತೆಗಳು ನಮಗೆ ಕೇಳಲು ನೋಡಲು ಸಿಗುತ್ತವೆ. ರಾಮಾಯಣದಷ್ಟೇ ಆ ಎಲ್ಲ ಕಥೆಗಳೂ ಪವಿತ್ರ. ಹಾಗಾಗಿ ಶ್ರೀರಾಮ ರಾಷ್ಟ್ರಪುರುಷ ಆತನ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವುದು ರಾಷ್ಟ್ರ ಮಂದಿರ.

ಅದಕ್ಕಾಗಿಯೇ ಶ್ರೀರಾಮನ ಜನ್ಮದಿನ ರಾಮನವಮಿ ಭಾರತದ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನ


Viewing all articles
Browse latest Browse all 3435

Trending Articles



<script src="https://jsc.adskeeper.com/r/s/rssing.com.1596347.js" async> </script>