Quantcast
Channel: Samvada
Viewing all articles
Browse latest Browse all 3435

ಹೋಟೆಲಿನಲ್ಲಿ ಊಟ ಮಾಡುವಾಗ ಇಲ್ಲದ ಮಡಿ ದೇವಸ್ಥಾನದ ಊಟದ ಪಂಕ್ತಿಯಲ್ಲಿ ಮಾತ್ರ ಏಕೆ?

$
0
0
ಸಾಂದರ್ಭಿಕ ಚಿತ್ರ

ಲೇಖಕರು: ಡಾ.ರೋಹಿಣಾಕ್ಷ  ಶಿರ್ಲಾಲು 

ಭೋಜನ ಮಾಡುವ ರೀತಿಯಿಂದ ಅಥವಾ ಸ್ಥಳದಿಂದ ಯಾರಾದರು ತಾವು ಜಗತ್ತಿನಲ್ಲಿ ಶ್ರೇಷ್ಟರು ಎಂದು ಭಾವಿಸುವುದಾದರೆ ಅಂಥವರ ಅಜ್ಞಾನಕ್ಕೆ ಒಮ್ಮೆ ನಕ್ಕು ಸುಮ್ಮನಾಗಿ ಬಿಡಬೇಕಷ್ಟೇ. ಆದರೆ ಅದೇ ಅಜ್ಞಾನವನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಿದಾಗ ಖಂಡಿತವಾಗಿಯೂ ಪ್ರಶ್ನಿಸಬೇಕಾಗುತ್ತದೆ. ಯಾಕೆಂದರೆ ಈ ಅಜ್ಞಾನ ಸಮಾಜದ ಆರೋಗ್ಯಕ್ಕೂ ತೊಂದರೆಯನ್ನುಂಟುಮಾಡುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ತನಗೆ ಹಿತವಾಗುವ ರೀತಿಯಲ್ಲಿ,  ತನ್ನ ಮನೆಯೊಳಗೆ ಬದುಕುವ ಸ್ವಾತಂತ್ರ್ಯ ಇದ್ದೇ ಇದೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ನಾವು ತೋರುವ ನಡವಳಿಕೆಯು ಸಮಾಜದ ಇತರರ ವ್ಯಕ್ತಿತ್ವದ ಘನತೆಗೆ ಕುಂದುಂಟು ಮಾಡುವುದಾದರೆ ಅಂತಹ ನಡವಳಿಕೆಯನ್ನು ತಪ್ಪು ಎಂದೇ ಹೇಳಬೇಕಾಗುತ್ತದೆ. ಮಾತ್ರವಲ್ಲ,ಬದಲಾಯಿಸಿಕೊಳ್ಳಲು ಅವಕಾಶವನ್ನೂ ನೀಡಿ, ಸರಿಯಾದ ದಾರಿ ಯಾವುದೆನ್ನುವುದನ್ನು ತೋರಿಸಬೇಕಾದುದು ಪ್ರಜ್ಞಾವಂತ ಸಮಾಜದ ಕರ್ತವ್ಯವೂ ಹೌದು. 

ಸಾವರ್ಕರ್ ಹಮ್ಮಿಕೊಂಡ ಸಹ ಭೋಜನ

ಇತ್ತೀಚೆಗೆ ದೇವಾಲಯವೊಂದರಲ್ಲಿ  ಭೋಜನದ ಪಂಕ್ತಿಯಲ್ಲಿ ಬೇಧ ಮಾಡಿದ್ದು ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು. ಮಾತ್ರವಲ್ಲ, ಆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಇದರ ಪರ-ವಿರುದ್ಧವಾಗಿ ಬಾರೀ ಪ್ರಮಾಣದ ಚರ್ಚೆಯೇ ನಡೆಯುತ್ತಿತ್ತು. ಈ ಚರ್ಚೆಯಲ್ಲಿ ಸಾಕಷ್ಟು ಜನ ಪ್ರತ್ಯೇಕ ಪಂಕ್ತಿ ಭೋಜನ ಹಿಂದೂ ಸಂಸ್ಕೃತಿ ಎಂದೂ, ಬ್ರಾಹ್ಮಣರ  ಊಟದ ಕ್ರಮ ಇತರರಿಗಿಂತ ಬೇರೆ ಎಂಬ ತರ್ಕವನ್ನು ಮಾಡಿದರು. ಮತ್ತೊಂದಷ್ಟು ಜನ ಈ ಪದ್ಧತಿಯೇ ಕಾಲಬಾಹಿರವೆಂದೂ ವಾದಿಸುತ್ತಿದ್ದರು. ನಮ್ಮ ಕಾಲದಲ್ಲಿ ಪ್ರತ್ಯೇಕ ಪಂಕ್ತಿ ಊಟದ ಅಪ್ರಸ್ತುತತೆ ಮತ್ತು ಅದು ಹಿಂದೂ ಸಮಾಜದ ಒಡಕಿಗೆ ಹೇಗೆ ಕಾರಣವಾಗಬಹುದೆನ್ನುವ ಕುರಿತು ಇಂದು ಮುಕ್ತವಾದ ಚರ್ಚೆಯನ್ನು ನಡೆಸಬೇಕಾಗಿದೆ.

ಮುಖ್ಯವಾದ ವಿಚಾರವೆಂದರೆ ಈ ಬೇಧವನ್ನು ತೋರಿಸುತ್ತಿರುವುದು ದೇವಾಲಯಗಳಲ್ಲಿ. ದೇವಾಲಯಗಳು ನಮ್ಮ ಸಮಾಜದ ಶ್ರದ್ಧೆಯ ತಾಣಗಳು ಎಂದು ಒಪ್ಪಿಕೊಳ್ಳುವುದಾದರೆ, ನಮ್ಮೆಲ್ಲಾ ತತ್ವಜ್ಞಾನಗಳು ನಿರೂಪಿಸುವ ದೇವರಿಗೆ ಯಾವುದೇ ಬೇಧವಿಲ್ಲ ಎನ್ನುವ ತರ್ಕವನ್ನು ಸಮ್ಮತಿಸುವುದಾದರೆ, ಕನಿಷ್ಠ ದೇವರ ಸಮ್ಮುಖದಲ್ಲಾದರೂ ಆತನ ಭಕ್ತರೆಲ್ಲರೂ ಹುಟ್ಟಿದ ಜಾತಿ, ಲಿಂಗ, ಊರು, ಕಸುಬುಗಳನ್ನು ಮೀರಿ ಸಮಾನರೆನ್ನುವ ತತ್ವವನ್ನು ಪಾಲಿಸಲಾಗದಿದ್ದರೆ, ಅಂತಹ ಭಕ್ತಿಯನ್ನು ನಿಜವಾದ ಭಕ್ತಿ ಎನ್ನಬಹುದೇ? ಖಂಡಿತವಾಗಿಯೂ ಸಾಧ್ಯವಿಲ್ಲ. ಹುಟ್ಟಿದ ಜಾತಿಯೊಂದೇ ತಮ್ಮ ಶ್ರೇಷ್ಠತೆಯನ್ನು ಸಾಬೀತು ಮಾಡುವ ಅರ್ಹತೆಯಾಗಬಲ್ಲುದೆ? ನಮ್ಮ ದೇಶದ ಸಂವಿಧಾನ ಸಮಾನತೆಯ ಆಶಯದ್ದು. ಇಲ್ಲಿ ಯಾರೂ ಹುಟ್ಟಿದ ಜಾತಿ, ಲಿಂಗದ ಕಾರಣಕ್ಕಾಗಿ ಶ್ರೇಷ್ಟರಾಗುವುದಕ್ಕೆ ಸಾಧ್ಯವಿಲ್ಲ. ನಾವು ಇಂದು ಬದುಕುತ್ತಿರುವುದು ಈ ಸಂವಿಧಾನದ ಅಡಿಯಲ್ಲಿ. ನಮ್ಮೆಲ್ಲ ಉದ್ಯೋಗ, ಅವಕಾಶ, ಸೌಲಭ್ಯಗಳೆಲ್ಲವೂ ಪ್ರಾಪ್ತವಾಗುತ್ತಿರುವುದು ಇದೇ ಸಂವಿಧಾನದ ಅಡಿಯಲ್ಲೇ. ಹೀಗಿರುವಾಗ ನಮ್ಮ ದೇವಾಲಯಗಳಲ್ಲಿ ನಡೆಯುವ ಆಚರಣೆಗಳು ತನ್ನ ಆಶಯದಲ್ಲಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗುವುದಾದರೆ? ಅಂತಹ ಆಚರಣೆಗಳನ್ನು ಉಳಿಸಿಕೊಳ್ಳಬೇಕೇ? ಈ ಪ್ರಶ್ನೆಯನ್ನು ನಾವಿಂದು ಕೇಳಿಕೊಳ್ಳಬೇಕಾಗಿದೆ. ಇಂತಹ ದ್ವಂದ್ವಕ್ಕೆ ಮುಖ್ಯ ಕಾರಣ ಸಂವಿಧಾನದ ಆಶಯ ನಮ್ಮ ಹೃದಯದೊಳಗೆ ಸ್ಥಾಪನೆಗೊಳ್ಳದಿರುವುದೇ ಆಗಿದೆ. ಕಾನೂನಿನ ಭಯವಿಲ್ಲದಿದ್ದರೆ ಇಂಥವರು ಅಸ್ಪೃಶ್ಯತೆಯನ್ನೂ ಧರ್ಮಬದ್ಧವೆಂದೇ ಸಮರ್ಥಿಸಿಕೊಳ್ಳುತ್ತಿದ್ದರು.  

ಎಲ್ಲೆಡೆಯೂ ರೂಢಿಯಲ್ಲಿರುವ ಪಂಕ್ತಿಬೇಧ ಎನ್ನುವುದು ಹಿಂದೂ ಧರ್ಮಕ್ಕೆ ಶತಮಾನಗಳಿಂದ ಅಂಟಿದ ಕಳಂಕ. ಇದನ್ನು ತೊಳೆದು ಶುಚಿಗೊಳಿಸುವವರೆಗೂ ಹಿಂದೂ ಧರ್ಮದ ನಿಜವಾದ ಬೆಳಕು ಲೋಕಕ್ಕೆ ಕಾಣಲು ಸಾದ್ಯವಿಲ್ಲ. ವಿಚಿತ್ರವಾದ ಸಂಗತಿ ಎಂದರೆ ಇಂದು ವಿಜ್ಞಾನ-ತಂತ್ರಜ್ಞಾನಗಳನ್ನು ಬಳಸಿ ಬದುಕಿನ ಉಳಿದೆಲ್ಲಾ ದಾರಿಗಳನ್ನು ಸುಗಮಗೊಳಿಸಿಕೊಂಡ ನಮಗೆ, ಸಹಮಾನವರನ್ನು ನಮ್ಮ ಸರಿಸಮಾನರೆಂದು ಪರಿಗಣಿಸಲು ಸಾಧ್ಯವಾಗದ ಅಜ್ಞಾನದಿಂದ ಹೊರಬರಲು ಸಾಧ್ಯವಾಗಿಲ್ಲ. ಶತಮಾನದ ಹಿಂದೆಯೇ ಸ್ವಾಮಿ ವಿವೇಕಾನಂದರು ಹಿಂದೂ ಸಮಾಜದ ಈ ಅಜ್ಞಾನವನ್ನು ಟೀಕಿಸುತ್ತಾ,  ತೀರ್ಥವನ್ನು ಎಡಗೈಯಿಂದ ತೆಗೆದುಕೊಳ್ಳಬೇಕೆ ? ಅಥವಾ ಬಲಗೈಯಿಂದ ತೆಗೆದುಕೊಳ್ಳಬೇಕೆ? ದೇವಾಲಯಕ್ಕೆ ಮೂರು ಸುತ್ತು ಪ್ರದಕ್ಷಿಣೆ ಮಾಡಬೇಕೆ? ಅಥವಾ ಐದು ಸುತ್ತು ಪ್ರದಕ್ಷಿಣೆ ಮಾಡಬೇಕೆ? ಎಂಬ ಕ್ಷುಲ್ಲಕ ಚರ್ಚೆಯಲ್ಲಿ ಮುಳುಗಿಹೋದ ನಮ್ಮ ಅಜ್ಞಾನದ ಬಗ್ಗೆ ವಿಷಾದದಿಂದ ಹೇಳಿದ್ದರು. 

ಇಂದೂ ಪ್ರತ್ಯೇಕ ಪಂಕ್ತಿ ಭೋಜನದ ಸಮರ್ಥನೆಗಿಳಿದವರ ಕಾರಣಗಳನ್ನು ನೋಡಿದರೆ ನಾವು 21ನೇ ಶತಮಾನದಲ್ಲಿದ್ದೇವೆಯೋ ಅಥವಾ 12ನೇ ಶತಮಾನದಲ್ಲಿದ್ದೇವೆಯೋ ಎಂದೆನಿಸಿದರೆ ಆಶ್ಚರ್ಯವಿಲ್ಲ. ಉಳಿದವರಿಗೆ ಬ್ರಾಹ್ಮಣರಂತೆ ಊಟ ಬಡಿಸಲು ಗೊತ್ತಿಲ್ಲ, ಬ್ರಾಹ್ಮಣರಂತೆ ಊಟ ಮಾಡಲು ಗೊತ್ತಿಲ್ಲ ಎನ್ನುತ್ತಾ ತಾವೇ ಶ್ರೇಷ್ಟರೆಂದು ಭಾವಿಸುತ್ತಾರೆ. ಆದರೆ ಇಲ್ಲಿರುವ ಪ್ರತಿಯೊಂದು ಸಮುದಾಯಗಳ ಊಟದ ಪದ್ಧತಿಯೂ , ಅಡುಗೆ ವಿಧಾನವೂ ಶ್ರೇಷ್ಠವೇ. ಅದನ್ನು ಕೀಳು ಎಂದು ತೀರ್ಪುಕೊಡುವ ಅಧಿಕಾರವನ್ನು ನೀಡಿದವರು ಯಾರು? ಬ್ರಾಹ್ಮಣೇತರರ ಊಟದ ಕ್ರಮವೇ ಅಸಹ್ಯವಾದುದು, ಬಡಿಸುವ ಕ್ರಮವೇ ಅಜ್ಞಾನದ್ದು ಎಂದು ತೀರ್ಮಾನಿಸುವ ಇವರ ದಾಷ್ಟ್ರ್ಯಕ್ಕೆ ನಾಗರಿಕ ಸಮಾಜದಲ್ಲಿ ಉತ್ತರವಿಲ್ಲ. ವಾಸ್ತವದಲ್ಲಿ ಊಟದ ಶಿಸ್ತಿಗೂ ಪ್ರತ್ಯೇಕ ಪಂಕ್ತಿಯ ಭೋಜನಕ್ಕೂ ಯಾವ ಸಂಬಂಧವೂ ಇಲ್ಲ. ಈ ಬೇಧ ಹುಟ್ಟಿರುವುದು ಮಾನಸಿಕವಾಗಿ ತಾವು ಶ್ರೇಷ್ಠರೆನ್ನುವ ಅಜ್ಞಾನಿಗಳಿಂದ. ಅದು ಉಳಿದವರಿಗಿಂತ ತಾವು ಶ್ರೇಷ್ಟರೆನ್ನುವ ಅಹಂಕಾರದ ಪ್ರತೀಕ. ತಾವು ಎಲೆಯಲ್ಲಿಯೇ ಊಟ ಮಾಡುವವರು, ಒಂದು ಕೈಯನ್ನು ಮಾತ್ರ ಊಟದ ಎಲೆಗೆ ಮುಟ್ಟಿಸುವವರು ಎನ್ನುವುದೇ ಶ್ರೇಷ್ಠತೆಯಾಗುವುದಾದರೆ, ಒಂದು ಕೈಯನ್ನೂ ಊಟಕ್ಕೆ ತಾಗಿಸದೆ ಸ್ಪೂನ್ ಮತ್ತು ಪೋರ್ಕ್‍ನಲ್ಲಿ ಊಟ ಮಾಡುವವರು ಇನ್ನೂ ಶ್ರೇಷ್ಠರಾಗಬೇಕಲ್ಲಾ? ರೊಟ್ಟಿ ಊಟ ಮಾಡುವ ಪ್ರದೇಶದ ಜನ ಎಡದ ಕೈಯಲ್ಲಿ ರೊಟ್ಟಿ ಹಿಡಿದು ಬಲದ ಕೈಯಲ್ಲಿ ರೊಟ್ಟಿ ಮುರಿದು ತಿನ್ನುವ ಜನರು ಹಾಗಾದರೆ ಅನಾಗರಿಕರೇ? 

 ಇನ್ನೂ ಕೆಲವರ ವಾದ ಬ್ರಾಹ್ಮಣೇತರರಿಗೆ ಬ್ರಾಹ್ಮಣರೊಂದಿಗೆ ಊಟ ಮಾಡುವ ಚಪಲವಂತೆ!  ನಾಚಿಕೆಯಾಗಬೇಕು. ತಾವು ಪಾಲಿಸುವುದೇ ಅತ್ಯಂತ ಅನಾಗರಿಕ ಕ್ರಮವನ್ನು. ಇನ್ನು ಅಂತಹವರೊಂದಿಗೆ ಊಟಮಾಡುವ ಚಪಲ ಯಾರಿಗಾದರೂ ಇದ್ದಿತೇ? ಇಷ್ಟಕ್ಕೂ ತಾವೇ ಪ್ರತ್ಯೇಕ ಪಂಕ್ತಿಯನ್ನು ನಿರಾಕರಿಸಬೇಕಾಗಿತ್ತು. ಅನೇಕ ಪ್ರಜ್ಞಾವಂತ ಬ್ರಾಹ್ಮಣರು ನಿರಾಕರಿಸಿದ್ದಾರೆ ಕೂಡ. ಆದರೆ ಹುಟ್ಟಿದ ಜಾತಿ ಮಾತ್ರ ಅರ್ಹತೆಯಾಗಿರುವ ಜಾತಿ ಬ್ರಾಹ್ಮಣರು ಇಂದಿಗೂ ತಾವು ಪರಮಶ್ರೇಷ್ಠ ಜನ್ಮ ಪಡೆದವರು ಎಂಬಂತೆ ಭಾವಿಸಿ, ಜೀವನದ ಅತಿದೊಡ್ಡ ಸಾಧನೆಯೇ ದೇವಾಲಯದೊಳಗೆ ಬ್ರಾಹ್ಮಣ ಪಂಕ್ತಿಯ ಭೋಜನ ಎಂದುಕೊಂಡವರಿದ್ದಾರೆ.ಜಾತ್ರೆಯ ಹಿಂದಿನದಿನ ಬೀದಿಬದಿಯ ಪಾನೀಪೂರಿ ತಿಂದಾಗ, ಹೊಟೆಲ್‍ನಲ್ಲಿ ಕುಳಿತು ಉಂಡಾಗ ಕಾಡದ ಮೈಲಿಗೆ, ದೇವಾಲಯದ ಊಟದ ಪಂಕ್ತಿಯಲ್ಲಿ ಮಾತ್ರ ಮಡಿ ಕಾಡಿತು ! ಇನ್ನೂ ಕೆಲವರು ಬೇರೆಲ್ಲೂ ಮೀಸಲಾತಿ ಇಲ್ಲದ ಬ್ರಾಹ್ಮಣರಿಗೆ ಪ್ರತ್ಯೇಕ ಪಂಕ್ತಿ ಭೋಜನವೆನ್ನುವುದು ಒಂದು ಮೀಸಲಾತಿ ಎಂದು ಭಾವಿಸಿದವರ ಬುದ್ಧಿವಂತಿಕೆಯ ಬಗ್ಗೆ ಕನಿಕರವನ್ನಷ್ಟೇ ತೋರಬಹುದು. ನೀವು ಮೀಸಲಾತಿ ಬಿಡಿ ನಾವು ಪ್ರತ್ಯೇಕ ಪಂಕ್ತಿಯ ಭೋಜನ ಬಿಡುತ್ತೇವೆ ಎಂದವರಿಗೆ ತಾವೂ ಮೀಸಲಾತಿಯ ಫಲಾನುಭವಿಗಳೇ ಎನ್ನುವುದರ ಬಗೆಗೆ ಜಾಣ ಮರೆವು ಕಾಡಿದೆ. 

ಹುಟ್ಟಿದ ಜಾತಿಯೊಂದರಿಂದಲೇ ತಾವು ಶ್ರೇಷ್ಟ ಎಂದು ಭಾವಿಸುವವರಿಗೆ ಇಂದು ಸರಿಯಾದ ಧಾರ್ಮಿಕ ಸಂಸ್ಕಾರ, ಶಿಕ್ಷಣದ ಅಗತ್ಯವಿದೆ. ನಾವು ಬದುಕುತ್ತಿರುವುದು 21ನೇ ಶತಮಾನದಲ್ಲಿ ಎನ್ನುವ ಕಾಮನ್‍ಸೆನ್ಸ್‍ನ  ತಿಳುವಳಿಕೆಯನ್ನಾದರೂ  ನೀಡಬೇಕಾಗಿದೆ. ಅಂತರಿಕ್ಷಕ್ಕೆ ಅಡಿಯಿಟ್ಟ ನಾವು ದೇಗುಲದೊಳಗೆ ಅಂತರವ ತೋರುವುದು ಸರಿಯೇ? ದೇಗುಲಗಳು ಒಂದು ಸಾರ್ವಜನಿಕ ಸ್ಪೇಸ್. ಅಲ್ಲಿನ ಎಲ್ಲಾ ಆಚರಣೆಗಳು, ಸಾರ್ವಜನಿಕ ಸಹಭಾಗಿತ್ವದಿಂದಲೇ ನಡೆಯುವುದು. ವ್ಯವಸ್ಥೆಯ ನಿರ್ವಹಣೆಯು ಸಾರ್ವಜನಿಕ ಭಕ್ತರ ಕಾಣಿಕೆ,ದಾನಗಳಿಂದಲೇ ಸಾಧ್ಯವಾಗಿರುವುದು. ಹೀಗಿರುವಾಗ ದೇವಾಲಯಗಳು ಅಲ್ಲಿಗೆ ಆಗಮಿಸುವ ಎಲ್ಲರಿಗೂ ಮುಕ್ತವಾಗಿರಬೇಕು. ಅಲ್ಲಿ ತೋರುವ ಯಾವುದೇ ಬೇಧವೂ ಸಮ್ಮತವಲ್ಲ.ಇಷ್ಟಾಗಿಯೂ ಕೆಲವು ಜನರಿಗೆ ತಾವು ಹುಟ್ಟಿನಿಂದಲೇ ಎಲ್ಲರಿಗಿಂತಲೂ ಶ್ರೇಷ್ಟ ಎಂಬ ಭಾವನೆ ಇರುವುದಾದರೆ ಅದಕ್ಕೆ ಎರಡು ಪರಿಹಾರಗಳಿವೆ. ಮೊದಲನೆಯದು ಅಂಥವರು ತಮ್ಮ ಶ್ರೇಷ್ಟತೆಯ ವ್ಯಸನವನ್ನು , ಹಿರಿಮೆಯನ್ನು ತಮ್ಮ ಮನೆಗಳಲ್ಲೇ ಇಟ್ಟುಕೊಂಡು ಸಾರ್ವಜನಿಕ ದೇವಾಲಯಗಳಿಗೆ ಬಾರದಿರಬಹುದು. ಮನೆ ಅವರ ಖಾಸಗಿ ಸ್ಥಳ.ಅಲ್ಲಿ ಯಾರನ್ನೂ ಮುಟ್ಟದೆ, ಅಡಚನೆ ಇಲ್ಲದೆ ತಮ್ಮ ಸಾಧನೆಯನ್ನು ಮಾಡಬಹುದು. ಎರಡನೆಯ ಪರಿಹಾರವೆಂದರೆ , ದೇಗುಲಗಳು ಸಾರ್ವಜನಿಕವಲ್ಲ, ತಮ್ಮ ಸಮುದಾಯಕ್ಕೆ ಮಾತ್ರ ಸೀಮಿತವಾದುದು ಎಂದು ಬಹಿರಂಗವಾಗಿ ಘೋಷಿಸಿಕೊಳ್ಳುವುದು. ಆ ಮೂಲಕ ಸಾರ್ವಜನಿಕರ ಪ್ರವೇಶ, ದೇಣಿಗೆ, ಕಾಣಿಕೆ, ಶ್ರಮಗಳನ್ನು ನಿರಾಕರಿಸಿ ತಾವೆ ನಿರ್ವಹಿಸುವುದು. ಆದರೆ ಇವೆರಡನ್ನೂ ಮಾಡಲಾರರು ! ಯಾಕೆಂದರೆ ಸಾರ್ವಜನಿಕರು ಬಾರದೇ ಹೋದರೆ ಅಲ್ಲಿಗೆ ಬರುವ ಆದಾಯದ ಸಮಸ್ತ ಮೂಲವೂ ನೀಂತೇ ಹೋಗುತ್ತದೆ. 

ಹಿಂದೂ ಸಮಾಜದಲ್ಲಿ ಯಾವುದೂ ಬದಲಾಗಬಾರದ ಧರ್ಮಗ್ರಂಥ ಆಧಾರಿತವಾದ ನಿಯಮಗಳಿಲ್ಲ.ಋಷಿಮುನಿಗಳೇ ಕಾಲ ಕಾಲಕ್ಕೆ ಬದಲಾಗದ ಸನ್ನಿವೇಶಗಳಿಗೆ ಅನುಗುಣವಾಗಿ ಪದ್ಧತಿಗಳನ್ನು ಬದಲಾಯಿಸಿಕೊಳ್ಳುವ ಸೂಚನೆಗಳನ್ನೆ ನೀಡಿದ್ದಾರೆ.ಕಾಲಬಾಹಿರವಾದ ನಡವಳಿಕೆಗಳನ್ನು, ಆಚರಣೆಗಳನ್ನು ಉಳಿಸಿಕೊಳ್ಳುವುದು ಅದನ್ನು ಸಮರ್ಥಿಸಿಕೊಳ್ಳುವುದು ನಾಗರಿಕ ಸಮಾಜದ ನಡವಳಿಕೆಯಾಗಲಾರದು. ಮನುಷ್ಯ ತನ್ನದೇ ಸಮಾಜದ ಸಹ ಮಾನವರನ್ನು ಆತ ಹುಟ್ಟಿದ ಜಾತಿ, ಚರ್ಮದ ಬಣ್ಣವನ್ನು ಮೀರಿ ಯೋಚಿಸಿ ಜತೆಗೆ ಬೆರೆಯಲಾರದೇ ಹೋದರೆ ಇದಕ್ಕಿಂತ ದುರಂತವಿದೆಯೇ? ಈ ನೋವಿಗೆ ಒಳಗಾಗಿಯೇ ಬಾಬಾಸಾಹೇಬ್ ಅಂಬೇಡ್ಕರ್ “ ನಮ್ಮೊಂದಿಗೆ ವಾಸಿಸದ, ನಮ್ಮೊಂದಿಗೆ ಊಟ ಮಾಡದ ಜನರ ಧರ್ಮ ನಮಗೇಕೆ ಬೇಕು’’ ಎಂದು ಕೇಳಿದ್ದ ಪ್ರಶ್ನೆಯನ್ನು ನಾವು ಮರೆಯುವ ಹಾಗಿಲ್ಲ. ದೇವಾಲಯಗಳಲ್ಲಿ ನೀಡುವ ಪ್ರತ್ಯೇಕ ಪಂಕ್ತಿಯ  ಊಟವನ್ನು ಯಾರಾದರೂ ಹಿಂದು ಧರ್ಮದ ತಳಹದಿ ಎಂದು ಭಾವಿಸುವುದಾದರೆ, ಈ ಕಾಲದ ನಾವು ಅಂತಹ ಅಡಿಪಾಯವನ್ನೇ ಬದಲಾಯಿಸುವ ಕರ್ತೃತ್ವಶಕ್ತಿಯನ್ನು ತೋರಬೇಕಾಗಿದೆ. ಸಹಪಂಕ್ತಿ ಕೇವಲ ಹಸಿವು ನಿವಾರಿಸುವ ಕಾರ್ಯಕ್ರಮವಲ್ಲ. ಅದು ಸಮಾನತೆ, ಬಂಧುತ್ವದ ಖಾತ್ರಿ ನೀಡುವ ನಮ್ಮ ನಡವಳಿಕೆ. ಅಂತಹ ನಡವಳಿಕೆಯನ್ನು ತೋರಲಾರದ ಜನ ಹೇಗೆ ತಾನೇ ಧರ್ಮಿಷ್ಟರಾಗಿರಲು ಸಾಧ್ಯ? 

 ದೇವಾಲಯಗಳಲ್ಲಿ ಜತೆಗೆ ಭೋಜನವನ್ನು ಮಾಡಿದ ಕೂಡಲೆ ಅದರಿಂದ ಯಾರಿಗೂ ಪುಣ್ಯ ಸಂಪಾದನೆಯಾಗುತ್ತದೆ ಎಂದು ಭಾವಿಸಬೇಕಾಗಿಲ್ಲ.ಅದು ಅದರ ಉದ್ದೇಶವೂ ಅಲ್ಲ. ಸಹಭೋಜನ ನಾಗರಿಕ ಹಕ್ಕು ಸ್ಥಾಪನೆಗಾಗಿ ನಾವು ನೀಡುವ ಸಹಭಾಗಿತ್ವ. ಅಂಬೇಡ್ಕರ್ ಬಹು ಹಿಂದೆಯೇ “ಅಂತರ್ಜಾತಿ ಭೋಜನ ಕೂಟಗಳಲ್ಲಿ ಭಾಗವಹಿಸಿದ ಮಾತ್ರಕ್ಕೆ ತಮ್ಮ ಉದ್ಧಾರವಾಯಿತೆಂದು ಅಸ್ಪøಶ್ಯರು ಭಾವಿಸುವ ಅಗತ್ಯವಿಲ್ಲ. ಹಾಗೇಯೇ, ಅಂತರ್ಜಾತಿ ಭೋಜನಕೂಟ ಏರ್ಪಡಿಸಿದ ಮಾತ್ರಕ್ಕೆ ಜಾತಿ ವ್ಯವಸ್ಥೆಯನ್ನು ತಾವು ಉಲ್ಲಂಘಿಸಿದೆ ಎಂಬ ತಿಳುವಳಿಕೆಯನ್ನು ಹಿಂದೂ ಸವರ್ಣಿಯರು ಬೆಳೆಸಿಕೊಳ್ಳುವ ಅಗತ್ಯವಿಲ್ಲ. ಸಮಾನತೆಯನ್ನು ಸಾಧಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಈ ಕ್ರಿಯೆಗಳು ನೆರವಾಗಬಹುದಷ್ಟೇ” ಎಂದಿದ್ದರು. ಸ್ವಾತಂತ್ರ್ಯವೀರ ಸಾವರ್ಕರ್ ಪತಿತ ಪಾವನ ಮಂದಿರ ಸ್ಥಾಪಿಸಿದ್ದಲ್ಲದೆ, ಸಮಾಜದೊಳಗೆ ಜಾತಿಯಾಧಾರಿತ ಬೇಧ ತೋರುವ ಎಲ್ಲಾ ನಡವಳಿಕೆಗಳನ್ನು ದಿಕ್ಕರಿಸಿದ್ದರು. ಜಾಡಮಾಲಿಯ ಕೈಯಿಂದ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಿ,ಅಂತರ್ಜಾತಿಯ ಸಹಬೋಜನವನ್ನು ಏರ್ಪಡಿಸುತ್ತಿದ್ದರು. ನಾವು ಈ ಮಹನೀಯರನ್ನು ಗೌರವಿಸುವ ನಿಜವಾದ ಆಶಯವುಳ್ಳವರಾದರೆ ಪಂಕ್ತಿಬೇಧವನ್ನು ನಿವಾರಿಸಲೇ ಬೇಕಾಗಿದೆ. ಎಲ್ಲಿಯವರೆಗೆ ಈ ದೇಶದಲ್ಲಿ ಸಾರ್ವಜನಿಕ ಕೆರೆ-ಬಾವಿಗಳು, ಮಠ-ಮಂದಿರಗಳು, ಶಾಲೆ – ಕಾಲೇಜುಗಳು ಮುಕ್ತವಾಗಿರುವುದಿಲ್ಲವೋ ಅಲ್ಲಿಯವರೆಗೆ ಈ ದೇಶ ವಿಶ್ವಗುರುವಾಗುವುದಾದರೂ ಹೇಗೆ? 

ದೇವಾಲಯಗಳಲ್ಲಿ ರೂಢಿಯಲ್ಲಿರುವ ಪಂಕ್ತಿ ಬೇಧ ನಮ್ಮ ಸಮಾಜದಲ್ಲಿ ಆಚರಣೆಯಲ್ಲಿರುವ ಅಸಮಾನತೆಯ ಜೀವಂತ ನಿದರ್ಶನ. ಹಿಂದೂ ಧರ್ಮದ ಅಸ್ತಿತ್ವ , ಅಸ್ಮಿತೆಗಳು ಪ್ರತ್ಯೇಕ ಪಂಕ್ತಿಯ ಭೋಜನದ ಮೇಲೆ ನಿಂತಿಲ್ಲ. ಅದು ಸಮಾಜದ ಭದ್ರ ತಳಪಾಯವಲ್ಲ. ಬದಲಾಗಿ ಅದು ಸಮಾಜವೆಂಬ ವೃಕ್ಷದ ಬೇರಿಗೆ ಹಿಡಿದ ಗೆದ್ದಲು ಹುಳು. ಇದರ ಪರಿಣಾಮವಾಗಿ ಮರ ತನ್ನಿಂದ ತಾನೇ ದುರ್ಬಲವಾಗುತ್ತದೆ ಮಾತ್ರವಲ್ಲ, ಹೊರಗಿನ ಸಣ್ಣ ಗಾಳಿಗೂ ಮರ ಉರುಳಿ ಹೋಗಬಹುದು. ಸಧ್ಯ ಮಾಡಬೆಕಾದ ಕೆಲಸವೆಂದರೆ, ಈ ಗೆದ್ದಲು ಹುಳದ ಮೇಲೆ ಸರಿಯಾದ ಔಷಧಿ ಪ್ರಯೋಗ. ಈ ಔಷಧಿ ಗೆದ್ದಲು ಹುಳವನ್ನಷ್ಟೇ ನಿರ್ಮೂಲನ ಮಾಡಿ ಮರವನ್ನು ಉಳಿಸಬೇಕು. ಅಂತಹ ಜವಾಬ್ದಾರಿಯನ್ನು ಔಷಧಿ ನೀಡುವವರು ವಹಿಸಕೊಳ್ಳಬೇಕಾಗಿದೆ. ತಜ್ಞತೆ ಇಲ್ಲವಾದರೆ , ಮರವನ್ನು ಉಳಿಸುವ ಕಾಳಜಿ ಇಲ್ಲವಾದರೆ, ಹುಳದೊಂದಿಗೆ ಮರವೂ ನಾಶವಾಗುವ ಅಪಾಯವಿದೆ. 

ಅಸಮಾನತೆಯನ್ನು ನೀವಾರಿಸಬೇಕೆನ್ನುವ ಕಾಳಜಿ ಇರುವ ಯಾರೂ ಈ ಬೇಧವೆನ್ನುವ ಅನಾಗರಿಕ ನಡವಳಿಕೆಯನ್ನು ಸಮರ್ಥಿಸಿಕೊಳ್ಳಲಾರರು. ಹೀಗಾಗಿ ಪಂಕ್ತಿಬೇಧವನ್ನು ಅಸ್ಪøಶ್ಯತೆಯ ಆಚರಣೆಗೆ ಸರಿಸಮಾನೆಂದು ಪರಿಗಣಿಸಿ,ಅದಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ತನ್ನ ವ್ಯಾಪ್ತಿಗೆ ಬರುವ ಎಲ್ಲಾ ದೇವಾಲಯಗಳಲ್ಲಿ ಇಂತಹ ಅಮಾನವೀಯ ಆಚರಣೆ ನಡೆಯಲು ಅವಕಾಶ ನೀಡುವುದಿಲ್ಲ ಎನ್ನುವ ಭರವಸೆಯನ್ನು ಭಕ್ತ ಜನರಿಗೆ ನೀಡಬೇಕಾಗಿದೆ. ಒಂದುವೇಳೆ ಅಂತಹ ಆಚರಣೆಯನ್ನು ನಡೆಸಿದರೆ ದೇಗುಲಗಳಿಗೆ ಸರ್ಕಾರದಿಂದಲೇ ನೇಮಕವಾಗಿರುವ ಆಡಳಿತಾಧಿಕಾರಿಗಳು ಮತ್ತು ಆಡಳಿತ ಮಂಡಳಿಯ ಸದಸ್ಯರನ್ನು ಹೊಣೆಯಾಗಿಸುವ ನಿಯಮಗಳನ್ನು ಜಾರಿಗೊಳಿಸಬೆಕಾಗಿದೆ. ಇಲಾಖಾ ವ್ಯಾಪ್ತಿಗೆ ಒಳಪಡದ ದೇವಾಲಯ, ಮಠಗಳಲ್ಲಿಯೂ ಇಂತಹ ಆಚರಣೆಗಳನ್ನು ಪೋಷಿಸಿದರೆ ಅಂತಹ ಕೇಂದ್ರಗಳ ಮೇಲೂ ಕಾನೂನು ಕ್ರಮ ಕೈಗೊಳ್ಳುವ ಎಚ್ಚರವನ್ನು ನೀಡಬೇಕಾಗಿದೆ. ಜತೆಗೆ ಪ್ರತ್ಯೆಕ ಪಂಕ್ತಿಯು ಅಮಾನವೀಯ ಎನ್ನುವ ತಿಳುವಳಿಕೆಯನ್ನು ಸಮುದಾಯದ ಹಿರಿಯರಿಗೆ ಈ ಸಮಾಜದ ಪ್ರಾಜ್ಞರೇ ಮೂಡಿಸಲು ಮುಂದೆ ಬರಬೇಕಾಗಿದೆ. ಫೇಸ್‍ಬುಕ್‍ನಲ್ಲಿ ಪಂಕ್ತಿಬೇಧವನ್ನು ಸಮರ್ಥಿಸುವ ತಥಾಕಥಿತ ಧರ್ಮರಕ್ಷಕರು ತಮ್ಮ ಪ್ರೊಫೈಲ್‍ನಲ್ಲಿ ಹಾಕಿಕೊಂಡಿರುವ ಶ್ರೀರಾಮನ, ನರೇಂದ್ರ ಮೋದಿಯವರ, ಸಾವರ್ಕರ್ ಅವರ ಚಿತ್ರಗಳನ್ನು ಬದಲಾಯಿಸುವುದು ಒಳ್ಳೆಯದು, ಯಾಕೆಂದರೆ ಎಲ್ಲರನ್ನೂ ಒಳಗೊಳ್ಳುವ ಆಶಯದ ಈ ಮಹನೀಯರ ಹೆಸರುಗಳು ನಿಮ್ಮ ಜಾತಿ ಕರ್ಮಠತೆಗೆ ಪತಾಕೆಗಳಾಗುವುದು ಬೇಡ. ಸಮಾನತೆಯ ಆಶಯದ ಸಂವಿಧಾನದಡಿಯಲ್ಲಿ, ಎಲ್ಲರೊಳಗೂ ಬ್ರಹ್ಮನಿದ್ದಾನೆ ಎಂಬ ನಮ್ಮ ದರ್ಶನದ ಬೆಳಕಿನಡಿಯಲ್ಲಿ ಕೂಡಿ ಬಾಳೋಣ. ಕೂಡಿ ಉಣ್ಣುವ. ಇದೇ ಹಿಂದುತ್ವ. ಇದೇ ಲೋಕದರ್ಶನ. 

ಕೃಪೆ: ವಿಜಯ ಕರ್ನಾಟಕ

ಡಾ.ರೋಹಿಣಾಕ್ಷ ಶಿರ್ಲಾಲು,

The post ಹೋಟೆಲಿನಲ್ಲಿ ಊಟ ಮಾಡುವಾಗ ಇಲ್ಲದ ಮಡಿ ದೇವಸ್ಥಾನದ ಊಟದ ಪಂಕ್ತಿಯಲ್ಲಿ ಮಾತ್ರ ಏಕೆ? first appeared on Vishwa Samvada Kendra.


Viewing all articles
Browse latest Browse all 3435

Trending Articles



<script src="https://jsc.adskeeper.com/r/s/rssing.com.1596347.js" async> </script>