ಬೆಂಗಳೂರು: “ವಾಯ್ಸ್ ಆಫ್ ಇಂಡಿಯಾದಂತಹ ಅಧ್ಯಯನ ಶೀಲ ಗ್ರಂಥಗಳು ಎಲ್ಲ ಭಾಷೆಯಲ್ಲೂ ಬರಬೇಕು ”ಎಂದು ಸರಸ್ವತಿ ಸಂಮಾನ್ ಪುರಸ್ಕೃತ ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು ಹೇಳಿದ್ದಾರೆ.
ಅವರು ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಸಾಹಿತಯ ಸಿಂಧು ಪ್ರಕಾಶನಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಡಿಸೆಂಬರ್ ೮ರಂದು ಜಯನಗರದ ಆರ್,ವಿ.ಟೀಚರ‍್ಸ್ ಕಾಲೇಜಿನಲ್ಲಿ ನಡೆದ ಅರುಣ್ ಶೌರಿ ಅವರ EMINENT HISTORIANS ಸೇರಿದಂತೆ ನಾಲ್ಕು ಪುಸ್ತಕಗಳ ಲೋಕಾರ್ಪಣ ಕಾರ್ಯಕ್ರಮದಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
‘ನಮ್ಮ ಇತಿಹಾಸವನ್ನು ಮೊದಲಿಗೆ ಬರೆದ ಬ್ರಿಟಿಷ್ ಇತಿಹಾಸಕಾರರಿಗೆ ಎಲ್ಲದರಲ್ಲೂ ನಾವು ಭಾರತೀಯರಿಗಿಂತ ಕಡಿಮೆಯಿಲ್ಲ ಎಂಬುದನ್ನು ತೋರಿಸುವುದು ಅವರ ಅಂತಿಮ ಉದ್ದೇಶವಾಗಿತ್ತು. ಭಾರತದ ಜ್ಞಾನಪುನರುಜ್ಜೀವನದಿಂದ ನಮ್ಮಲ್ಲಿ ಸ್ವಲ್ಪಮಟ್ಟಿಗೆ ಆತ್ಮವಿಶ್ವಾಸ ಬಂದು ನಮ್ಮ ಪರಂಪರೆ ಅವರಿಗೆ ಸಮಾನ ಎಂಬ ಆತ್ಮವಿಶ್ವಾಸ ಬಂದರೂ ಕೂಡ ಬೌದ್ಧ ಮತು ಹಿಂದೂ ಧರ್ಮಗಳು ಕ್ರೈಸ್ತಮತಕ್ಕೆ ಸಮಾನವಾದರೂ ಪರಿಪೂರ್ಣವಾದದ್ದು ಕ್ರೈಸ್ತಮತ ಮಾತ್ರ ಎಂಬ ಬ್ರಿಟಿಷ್ ಪಾದ್ರಿ ಗ್ಯಲವೆ ಸಿದ್ಧಾಂvವೇ ಮುಂದುವರಿಯಿತು. ಡಾ. ಎಸ್. ರಾಧಾಕೃಷ್ಣನ್, ಆನಂದ ಕುಮಾರಸ್ವಾಮಿಯಂತಹ ವಿದ್ವಾಂಸರು ಕೂಡ ಎಲ್ಲ ಧರ್ಮಗಳ ಸಂದೇಶ ಒಂದೇ ಎಂಬ ಧಾಟಿಯಲ್ಲೇ ಮಾತನಾಡಿದರು. ಅದನ್ನು ಅಲ್ಲಗಳೆದು ಹಿಂದೂ ಧರ್ಮ ಏನು? ಅನ್ಯಮತಗಳೇನು ಎಂಬುದನ್ನು ದೇಶದಲ್ಲಿ ಸ್ಪಷ್ಟವಾಗಿ ತೋರಿಸಿದವರು ರಾಮ್‌ಸ್ವರೂಪ್ ಮತ್ತು ಸೀತಾರಾಮ್ ಗೋಯಲ್ ‘ ಎಂದು ಡಾ. ಭೈರಪ್ಪ ವಿವರಿಸಿದರು.
ಪ್ರವಾದಿ ಅಲ್ಲದಿದ್ದರೆ ಅದು ಮತ(ರಿಲಿಜಿಯನ್)ವೇ ಅಲ್ಲ. ಒಬ್ಬನೇ ದೇವರು; ಅವನು ತನ್ನ ಬೋಧನೆಯನ್ನು ನನ್ನ ಮೂಲಕ ಪ್ರಕಟಿಸಿದ್ದಾನೆ; ಇದನ್ನು ನಂಬಿದರೆ ಸ್ವರ್ಗ; ನಂಬದಿದ್ದರೆ ನರಕ – ಎಂದು ಪ್ರವಾದಿ ಮತಗಳು ಹೇಳುತ್ತವೆ. ಆದರೆ ಹಿಂದು ಧರ್ಮಕ್ಕೆ ಪ್ರವಾದಿ ಇಲ್ಲ. ಋಷಿಗಳು ಮಾತ್ರ ಇದ್ದಾರೆ. ವೇದಗಳಲ್ಲಿ ಋಷಿಗಳ ತತ್ತ್ವಶಾಸ್ತ್ರೀಯ ಮಿಂಚು(ಬೆಳಕು)ಗಳು ಕಾಣುತ್ತವೆ. ಅವುಗಳ ಸಾರ ಉಪನಿಷತ್‌ಗಳಲ್ಲಿ ಇದ್ದರೂ ಕೂಡ ಅವುಗಳ ಗೂಡಾರ್ಥ ಸಾಮಾನ್ಯರಿಗೆ ತಿಳಿಯದು. ಉಪನಿಷತ್‌ಗಳ ಸಾರವನ್ನು ಹೇಳುವ ಬ್ರಹ್ಮಸೂತ್ರಗಳು ಕೂಡ ಕ್ಲಿಷ್ಟವಾಗಿವೆ. ಆದರೆ ಋಷಿಗಳಾದ ವ್ಯಾಸ-ವಾಲ್ಮೀಕಿಗಳು ರಚಿಸಿದ ರಾಮಾಯಣ ಮಹಾಭಾರತಗಳು ವೇದಸಂಸ್ಕೃತಿಯನ್ನು ಸ್ಪಷ್ಟವಾಗಿ ಚಿತ್ರಿಸಿವೆ ಎಂದವರು ತಿಳಿಸಿದರು. ಕುರಾನ್‌ನಲ್ಲಿ ೨೩ ಕಡೆ ನನ್ನ ಮತವನ್ನು ಒಪ್ಪದವರನ್ನು ಕೊಲ್ಲಿ ಎಂದು ಹೇಳಿದೆ. ಹಾಗೆ ಕೊಂದರೆ ಸರ್ಗ ಸಿಗುತ್ತದೆ. ಅಲ್ಲಿ ಚಿನ್ನದ ಅರಮನೆ, ತಂಪುಹವೆ, ಸುಂದರಿಯರಾದ ೭೨ ಮಂದಿ ಕನ್ಯೆಯರು ನಿಮ್ಮವರಾಗುತ್ತಾರೆ ಎಂದು ಕುರಾನ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದ ಭೈರಪ್ಪನವರು, ಈ ಕಾರಣದಿಂದಲೇ ಮುಸಲ್ಮಾನ್ ಯುವಕರು ಭಯೋತ್ಪಾದಕ ರಾಗುತ್ತಿದ್ದಾರೆ ಎಂದರು. ಯೇಸು ತಾನು ದೇವರ ಮಗ ಎಂದು ಹೇಳಿಕೊಂಡು ತನ್ನ ಮಾತನ್ನು ಪಾಲಿಸುವಂತೆ ಆದೇಶಿಸಿದ್ದಾರೆ. ಈ ಪ್ರವಾದಿ ಮತಗಳಲ್ಲಿ ತನ್ನ ಮಾತನ್ನು ವಿಧಿಸುವ ಅಹಂಕಾರವಿದ್ದರೆ ಹಿಂದೂಧರ್ಮ ಅಂತಹ ಒಂದು ರಿಲಿಜಿಯನ್ ಅಲ್ಲ; ಅದು ಧರ್ಮ ಎಂದು ವಿವರಿಸಿದರು.
ಭಾರತದ ಇತಿಹಾಸವನ್ನು ತಿರುಚಿದ ಬಗ್ಗೆ ತಿಳಿಸುತ್ತಾ, ಬ್ರಿಟಿಷರು ಆರಂಭಿಸಿದ ಕೆಲಸ ಸ್ವತಃ ಇತಿಹಾಸಕಾರರು ಎನಿಸಿಕೊಂಡ ಮೊದಲ ಪ್ರಧಾನಿ ಅವರ ಕಾಲದಲ್ಲಿ ಮುಂದುವರಿಯಿತು. ಅವರ ಮಗಳು ಪ್ರಧಾನಿಯಾದಾಗ ಕಮ್ಯುನಿಷ್ಠರು ಕಾಂಗ್ರೆಸ್ ಸರಕಾರವನ್ನು ಬೆಂಬಲಿಸಿ ಶಿಕ್ಷಣದಂತಹ ಪ್ರಮುಖ ಖಾತೆಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಅವರ ಇಷ್ಟದಮತೆ ದೆಹಲಿಯ ಜೆಎನ್‌ಯು (ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ) ಸ್ಥಾಪನೆಗೊಂಡಿತು. ಐಸಿಎಚ್‌ಆರ್(ಭಾರತೀಯ ಇತಿಹಾಸ ಸಂಶೋಧನ ಮಂಡಳಿ) ಮುಂತಾದ ಸಂಸ್ಥೆಗಳಲ್ಲಿ ಅವರ ಜನರೇ ತುಂಬಿದರು. ಬೇರೆ ರೀತಿಯ ಚಿಂತನೆ ಇದ್ದವರಿಗೆ ಆ ಸಂಸ್ಥೆಗಳು ಉದ್ಯೋಗ ನೀಡಲಿಲ್ಲ; ಅವರ ಪುಸ್ತಕಗಳನ್ನು ಪ್ರಕಟಿಸಲಿಲ್ಲ. ಇತಿಹಾಸ, ಸಮಾಜಶಾಸ್ತ್ರವಲ್ಲದೆ ಸಾಹಿತ್ಯ, ಅರ್ಥಶಾಸ್ತ್ರ ಕ್ಷೇತ್ರಗಳಿಗೂ ಇದು ವಿಸ್ತರಿಸಿತು. ಅಂತಹ ಸನ್ನವೇಶದಲ್ಲಿ ರಾಮ್ ಸ್ವರೂಪ್ ಮತ್ತು ಸೀತಾರಾಮ್ ಗೋಯಲ್ ಮೂಲಗ್ರಂಥಗಳ ಅಧ್ಯಯನ ನಡೆಸಿ ಯಾವ ಮತಗಳೇನು? ಅವುಗಳ ಸ್ವರೂಪ-ದೋಷಗಳೇನು? ಹಿಂದೂಧರ್ಮ ಏನು ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ನೀಡಿದರು. ಪ್ರಕಾಶಕರು ಸಿಗುವುದು ಕಷ್ಟವಾದಾಗ ತಾವೇ ಸಂಸ್ಥೆ (ವಾಯ್ಸ್ ಆಫ್ ಇಂಡಿಯಾ) ಸ್ಥಾಪಿಸಿ ಪುಸ್ತಕ ಪ್ರಕಟಿಸಿದರು ಎಂದು ಶ್ಲಾಘಿಸಿದ ಭೈರಪ್ಪ, ಅವರ ಬರಹಗಳಿಂದ ತಮ್ಮ ಈ ಕುರಿತ ಚಿಂತನೆಗಳು ಸ್ಪಷ್ಟವಾದವು. ’ಆವರಣ’ ಕಾದಂಬರಿಯಲ್ಲಿ ಅವುಗಳಿಗೆ ಸಂಬಂಧಿಸಿದ ದಾಖಲೆಗಲನ್ನು ರೆಫರೆನ್ಸ್ ರೂಪದಲ್ಲಿ ಪುಸ್ತಕದಲ್ಲಿಯೇ ನೀಡಲಾಗಿದೆ. ವಾಯ್ಸ್ ಆಫ್ ಇಂಡಿಯಾದಂತಹ ಅಧ್ಯಯನ ಶೀಲ ಗ್ರಂಥಗಳು ಎಲ್ಲ ಭಾಷೆಯಲ್ಲೂ ಬರಬೇಕು ಎಂದು ಆಶಿಸಿದರು.
ಪುಸ್ತಕಗಳನ್ನು ಕುರಿತು ಮಾತನಾಡಿದ ಖ್ಯಾತ ಚಿಂತಕ, ವಿಮರ್ಶಕ ಅಜಕ್ಕಳ ಗಿರೀಶ್ ಭಟ್ ಅವರು, ಇಂದು ಎಲ್ಲವನ್ನೂ ಕೋಮುವಾದಿ ಅಥವಾ ಜಾತ್ಯಾತೀತ(ಸೆಕ್ಯುಲರ್) ಮುಂತಾಗಿ ವಿಭಜಿಸುವ ಸರಳೀಕರಣ ಜಾಸ್ತಿಯಾಗಿದೆ. ಅದಕ್ಕೆ ಹೆದರುವ ವಿದ್ಯಾವಂತರು ಮಧ್ಯಮವರ್ಗದವರು ಎರಡರಿಂದಲೂ ದೂರಿರಲು ಬಯಸಿ ಮೌನವಾಗಿರುತ್ತಾರೆ. ಉದಾಹರಣೆಗೆ ಟಿಪ್ಪು ವಿವಿ ಬೇಡ ಎಂದರೆ ಕೋಮುವಾದಿ ಆಗುತ್ತೇವೆ. ವಿವಿ ಆಗಲೀ ಎಂದರೆ ಸೆಕ್ಯುಲರ್ ಆಗುತ್ತೇವೆ ಎಂಬ ಮಾನಸೀಕತೆ ಇಂದು ಹಬ್ಬಿದೆ ಎಂದು ವಿವರಿಸಿದರು.
ಅರುಣ್ ಶೌರಿ ಅವರ ’ದಿ ಎಮಿನೆಂಟ್ ಹಿಸ್ಟೋರಿಯನ್’ ಕೃತಿ ಐಸಿಎಚ್‌ಆರ್ , ಐಸಿಎಸ್‌ಎಸ್‌ಆರ್, ಎನ್‌ಸಿಇಆರ್‌ಟಿ (ಶಿಕ್ಷಣ ಸಂಶೋಧನೆ, ತರಬೇತಿಯ ರಾಷ್ಟ್ರೀಯ ಮಂಡಳಿ) ಸಂಸ್ಥೆಗಳಲ್ಲಿ ಸೇರಿಕೊಂಡವರು, ಅವರು ನಡೆಸುವ ಆರ್ಥಿಕ ಭ್ರಷ್ಟಾಚಾರ ಹಾಗೂ ಬೌದ್ಧಿಕ ಅಪ್ರಾಮಾಣಿಕತೆಗಳನ್ನು ಬಯಲಿಗೆಳೆದಿದ್ದಾರೆ; ನಾವಿಂದು ದಿಕ್ಕುತಪ್ಪಿರುವುದರ ಕಾರಣ ತಿಳಿಸಿದ್ದಾರೆ ಎಂದ ಅಜಕ್ಕಳ ಗಿರೀಶ ಭಟ್, ಹಂಪಿ ವಿವಿಯಲ್ಲಿ ಕೂಡಾ ಅವ್ಯವಹಾರವಾಗಿ ಒಬ್ಬರ ಅಮಾನತು ಕೂಡಾ ಆಗಿರುವುದನ್ನು ಉಲ್ಲೇಖಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಧಾನ ಸಂಪಾದಕ ಡಾ. ಎಸ್.ಆರ್. ರಾಮಸ್ವಾವಿ, ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ, ಅನುವಾದಕರೂ ವಾಯ್ಸ್ ಆಫ್ ಇಂಡಿಯಾ ಸರಣಿಯ ಸಂಪಾದಕರೂ ಆದ ಮಂಜುನಾಥ್ ಅಜ್ಜಂಪುರ, ಲೇಖಕ ಟಿ.ಎ.ಪಿ. ಶೆಣೈ ಹಾಗೂ ಶ್ರೀನಿವಾಸ ಸುಬ್ರಹ್ಮಣ್ಯಂ ಉಪಸ್ಥಿತರಿದ್ದರು.