೨೦೨೨ ರ ಆಗಸ್ಟ್ ೧೫ ರಂದು ಭಾರತವು ಸ್ವತಂತ್ರಗೊಂಡು ೭೫ ವರ್ಷಗಳು ಪೂರ್ಣಗೊಳ್ಳುತ್ತವೆ. ಸ್ವಾತಂತ್ರ‍್ಯದ ಅಮೃತ ಮಹೋತ್ಸವವನ್ನು ಆಚರಿಸಲು, ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ. ಇವು ವರ್ಷದುದ್ದಕ್ಕೂ ನಡೆಯುತ್ತಿರುತ್ತವೆ. ನಾವೀಗ ಉತ್ಸವವನ್ನು ಆಚರಿಸುತ್ತಿದ್ದೇವೆ ಎನ್ನುವುದರ ಅರ್ಥ, ನಮ್ಮ ಮುಂದೆ ಈಗ ಯಾವ ಸಮಸ್ಯೆಗಳೂ ಉಳಿದಿಲ್ಲ ಎನ್ನುವ ಸ್ಥಿತಿಯನ್ನು ನಾವು ತಲುಪಿಬಿಟ್ಟಿದ್ದೇವೆ ಎಂದಲ್ಲ. ಹಿಂದೆ ಇದ್ದ ಕೆಲವು ಸಮಸ್ಯೆಗಳು ಪರಿಹಾರವಾಗಿವೆ, ಕೆಲವು ಇಂದಿಗೂ ಇವೆ, ಮತ್ತೂ ಕೆಲವು ಹೊಸದಾಗಿ ಹುಟ್ಟಿಕೊಂಡಿವೆ. ಮುಂದಕ್ಕೂ ಇದು ಇದೇ ರೀತಿ ನಡೆಯುತ್ತಿರುತ್ತದೆ. ಹೀಗಿದ್ದಾಗ್ಯೂ, ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಸಮಯದಲ್ಲಿ ನಾವು ಕಾಣುತ್ತಿರುವ ಆನಂದದ ವಾತಾವರಣ ಅತ್ಯಂತ ಸ್ವಾಭಾವಿಕವಾಗಿದೆ. ಹಲವು ಶತಮಾನಗಳ ನಂತರ, ೧೯೪೭ ರ ಆಗಸ್ಟ್ ೧೫ ರಂದು ನಾವು ನಮ್ಮ ದೇಶದ ಹೆಚ್ಚಿನ ಪ್ರದೇಶಗಳಲ್ಲಿ ನಮ್ಮ ಇಚ್ಛೆಯ ಪ್ರಕಾರ ಶಾಸನಗಳನ್ನು ಮಾಡುವ ಮತ್ತು ಇತರ ವ್ಯವಸ್ಥೆಗಳನ್ನು ರೂಪಿಸುವ ಅಧಿಕಾರವನ್ನು ಪಡೆಯಲು ಸಾಧ್ಯವಾಯಿತು. ಇಲ್ಲಿ ಎಷ್ಟು ವರ್ಷಗಳ ಗುಲಾಮೀ ಕಾಲಖಂಡವಿತ್ತೋ ಅಷ್ಟೇ ಧೀರ್ಘವಾದ ಸಂಘರ್ಷವನ್ನು ಭಾರತೀಯರು ತಮ್ಮ ಸ್ವಾತಂತ್ರ‍್ಯ ಪ್ರಾಪ್ತಿಗಾಗಿ ನಡೆಸಿದ್ದಾರೆ.
ವಿದೇಶೀ ಆಡಳಿತದ ವಿರುದ್ಧ ಭಾರತೀಯರು ನಡೆಸಿದ ಸಂಘರ್ಷವು ಭೌಗೋಲಿಕ ದೃಷ್ಟಿಯಲ್ಲಿ ಸರ್ವವ್ಯಾಪಿಯಾಗಿತ್ತು. ಸಮಾಜದ ಎಲ್ಲ ವರ್ಗದ ಜನರೂ ಈ ಸಂಘರ್ಷದಲ್ಲಿ ತಮ್ಮ ಕೊಡುಗೆಯನ್ನು ನೀಡಿದರು. ಪ್ರತಿಯೊಬ್ಬರೂ ತಮ್ಮ ಶಕ್ತಿಗೆ ಅನುಗುಣವಾದ ರೀತಿಯಲ್ಲಿ ಕೊಡುಗೆಯನ್ನು ಸಲ್ಲಿಸಿದರು. ಸ್ವಾತಂತ್ರ‍್ಯ ಪ್ರಾಪ್ತಿಗಾಗಿ ಸಶಸ್ತç ಅಥವಾ ನಿಃಶಸ್ತç ಪ್ರಯತ್ನಗಳ ಜೊತೆಗೆ, ಸಮಾಜದ ವಿಭಿನ್ನ ದೋಷಗಳ ಕುರಿತಾಗಿ ಜಾಗೃತಿಯನ್ನುಂಟು ಮಾಡುವ ಮತ್ತು ಸಮಾಜದಲ್ಲಿ ಪರಿವರ್ತನೆಯನ್ನು ತರುವ ವಿವಿಧ ಕಾರ್ಯಗಳು ಕೂಡಾ ಸ್ವಾತಂತ್ರ‍್ಯ ಹೋರಾಟದ ಭಾಗವಾಗಿಯೇ ನಡೆದವು.
ಈ ಎಲ್ಲ ಪ್ರಯತ್ನಗಳ ಫಲವಾಗಿ ೧೯೪೭ ರ ಆಗಸ್ಟ್ ೧೫ ರಂದು ಭಾರತವನ್ನು ನಮ್ಮ ಮನಸ್ಸಿಗೆ ಒಪ್ಪುವಂತೆ, ನಮ್ಮ ಇಚ್ಚೆಗೆ ಅನುಗುಣವಾಗಿ, ನಮ್ಮದೇ ಜನರ ಮೂಲಕ ಆಳಲು ಸಾಧ್ಯವಾಗುವ ಸ್ಥಿತಿಯನ್ನು ನಾವು ಗಳಿಸಿಕೊಂಡೆವು. ಬ್ರಿಟಿಷ್ ಆಡಳಿತಗಾರರನ್ನು ಇಲ್ಲಿಂದ ಹೊಡೆದೋಡಿಸಿದ ನಾವು, ನಮ್ಮ ದೇಶವನ್ನು ನಡೆಸುವ ಆಡಳಿತಸೂತ್ರವನ್ನು ನಮ್ಮ ಕೈಗಳಿಗೆ ತೆಗೆದುಕೊಂಡೆವು.
ಹೀಗಾಗಿ ಸ್ವಾತಂತ್ರ‍್ಯದ ಎಪ್ಪತ್ತೈದು ವರ್ಷಗಳು ಪೂರ್ಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ನಮ್ಮೆಲ್ಲರಲ್ಲಿ ಕಾಣುತ್ತಿರುವ ಉತ್ಸಾಹ, ದೇಶದಲ್ಲಿ ಎದ್ದಿರುವ ಉತ್ಸವದ ವಾತಾವರಣ ಅತ್ಯಂತ ಸ್ವಾಭಾವಿಕವಾದುದಾಗಿದೆ ಮತ್ತು ಸೂಕ್ತವೂ ಆಗಿದೆ. ಈ ಸುದೀರ್ಘ ಸಂಘರ್ಷದಲ್ಲಿ ಯಾವ ವೀರರು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ, ಕಠಿಣ ಪರಿಶ್ರಮದ ಮೂಲಕ ನಮಗೆ ಈ ಸ್ವಾತಂತ್ರ‍್ಯವನ್ನು ಗಳಿಸಿಕೊಟ್ಟರೋ, ಯಾರು ತಮ್ಮ ಸರ್ವಸ್ವವನ್ನೂ ಹೋಮ ಮಾಡಿದರೋ, ಯಾರು ತಮ್ಮ ಪ್ರಾಣವನ್ನೂ ನಗುನಗುತ್ತಾ ಅರ್ಪಿಸಿದರೋ, (ನಮ್ಮ ಈ ವಿಶಾಲ ದೇಶದ ಎಲ್ಲ ಸ್ಥಳಗಳಲ್ಲಿ, ದೇಶದ ಪ್ರತಿಯೊಂದು ಸಣ್ಣಸಣ್ಣ ಭೂಭಾಗಗಳಲ್ಲೂ ಈ ರೀತಿಯ ವೀರರು ತಮ್ಮ ಪರಾಕ್ರಮವನ್ನು ತೋರಿಸಿದ್ದಾರೆ) ಅಂತಹವರ ವಿಚಾರವನ್ನು ಹುಡುಕಿ ತೆಗೆದು, ಅವರ ತ್ಯಾಗ, ಬಲಿದಾನಗಳ ಕಥೆಯನ್ನು ಇಡೀ ಸಮಾಜದ ಮುಂದಿಡಬೇಕು. ಮಾತೃಭೂಮಿ ಮತ್ತು ದೇಶಬಾಂಧವರ ವಿಷಯದಲ್ಲಿ ಅವರಿಗಿದ್ದ ಆತ್ಮೀಯತೆ, ದೇಶಬಾಂಧವರ ಹಿತಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಲು ಅವರಿಗಿದ್ದ ಪ್ರೇರಣೆ ಮತ್ತು ಅವರ ಅತ್ಯಪೂರ್ವವಾದ ತ್ಯಾಗಮಯ ಆದರ್ಶದ ಪಾತ್ರವನ್ನು ನಾವೆಲ್ಲರೂ ಸ್ಮರಿಸಬೇಕು.
ಜೊತೆಗೆ ಈ ಸಂದರ್ಭದಲ್ಲಿ ಅವರ ಉದ್ದೇಶ, ಸಂಕಲ್ಪ ಮತ್ತು ಕರ್ತವ್ಯಗಳನ್ನೂ ನಾವು ಸ್ಮರಿಸಿಕೊಂಡು, ಅವನ್ನು ಪೂರ್ಣಗೊಳಿಸಲಿಕ್ಕಾಗಿ ನಾವು ಮತ್ತೊಮ್ಮೆ ಕಟಿಬದ್ಧರಾಗಬೇಕು ಮತ್ತು ಸಕ್ರಿಯರಾಗಬೇಕು. ದೇಶಕ್ಕೆ ಸ್ವರಾಜ್ಯವು ಏಕೆ ಬೇಕು? ಸುರಾಜ್ಯವಷ್ಟೇ ಅದರ ಉದ್ದೇಶವಾಗಿದ್ದರೆ, ಅದು ಪರಕೀಯರ ಆಡಳಿತದಿಂದಲೇ ಏಕೆ ಸಾಧ್ಯವಾಗುತ್ತಿರಲಿಲ್ಲ, ದೇಶ ಮತ್ತು ದೇಶವಾಸಿಗಳ ಉದ್ದೇಶ ಅವರಿಂದಲೇ ಏಕೆ ಪೂರ್ಣಗೊಳ್ಳುತ್ತಿರಲಿಲ್ಲ? ಅದು ಏಕೆ ಸಾಧ್ಯವಾಗುತ್ತಿರಲಿಲ್ಲ ಎನ್ನುವುದನ್ನು ನಾವೆಲ್ಲರೂ ಸ್ಪಷ್ಟವಾಗಿ ಅರಿತುಕೊಳ್ಳಬೇಕು. ‘ಸ್ವ’-ತ್ವದ (ತನ್ನತನ) ಅಭಿವ್ಯಕ್ತಿಯೇ ಪ್ರತಿಯೊಬ್ಬ ವ್ಯಕ್ತಿ ಮತ್ತು ಸಮಾಜದ ಸ್ವಾಭಾವಿಕ ಆಕಾಂಕ್ಷೆಯಾಗಿರುತ್ತದೆ, ಇದೇ ಸ್ವಾತಂತ್ರ‍್ಯ ಗಳಿಕೆಗೂ ಪ್ರೇರಣೆಯಾಗಿದೆ. ಮನುಷ್ಯನು ಸ್ವತಂತ್ರನಾಗಿದ್ದರೆ ಮಾತ್ರ ಸುರಾಜ್ಯವನ್ನು ಅನುಭವಿಸಬಲ್ಲ, ಇಲ್ಲದಿದ್ದರೆ ಅದು ಸಾಧ್ಯವಿಲ್ಲ. “ಜಗತ್ತಿಗೆ ಯಾವುದಾದರೂ ಕೊಡುಗೆ ನೀಡಲೆಂದೇ ಪ್ರತಿಯೊಂದು ರಾಷ್ಟçವೂ ಜನ್ಮ ತಾಳಿರುತ್ತದೆ”, ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಯಾವುದೇ ರಾಷ್ಟçವು ಜಗತ್ತಿಗೆ ಕೊಡುಗೆ ನೀಡಬೇಕಾದರೆ, ಅದು ಸ್ವತಂತ್ರವಾಗಿರಲೇಬೇಕು. ರಾಷ್ಟçಜೀವನದಲ್ಲಿ ತನ್ನ ಸ್ವತ್ವದ ಅಭಿವ್ಯಕ್ತಿಯ ಮೂಲಕ ಆ ರಾಷ್ಟçವು ಜಗತ್ತಿಗೆ ಕೊಡುಗೆಯನ್ನು ನೀಡುವ ಕರ್ತವ್ಯವನ್ನು ನಿರ್ವಹಿಸುತ್ತದೆ. ಹೀಗಾಗಿ, ರಾಷ್ಟçವೊಂದು ಜಗತ್ತಿಗೆ ಕೊಡುಗೆಯನ್ನು ನೀಡಬೇಕೆಂದರೆ, ಅದು ಸ್ವತಂತ್ರವಾಗಿರುವುದು ಮತ್ತು ಸಮರ್ಥವಾಗಿರುವುದು ಅತ್ಯಗತ್ಯವಾಗಿದೆ.
ಭಾರತದ ಸ್ವಾತಂತ್ರ‍್ಯಕ್ಕಾಗಿ ಭಾರತೀಯರಲ್ಲಿ ಜಾಗೃತಿಯನ್ನುಂಟುಮಾಡಿದ, ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಪ್ರತ್ಯಕ್ಷವಾಗಿ ಪಾಲ್ಗೊಂಡು ಸಶಸ್ತç ಅಥವಾ ನಿಃಶಸ್ತç ಆಂದೋಳನದ ಮಾರ್ಗವನ್ನು ಹಿಡಿದು ಸಕ್ರಿಯವಾಗಿ ಕಾರ್ಯ ಮಾಡಿದ ಅನೇಕ ಮಹಾಪುರುಷರು, ಸ್ವಾತಂತ್ರ‍್ಯ ಪ್ರಾಪ್ತಿ ಎಷ್ಟು ಮುಖ್ಯವೋ, ಆ ಸ್ವಾತಂತ್ರ‍್ಯವನ್ನು ಪಾಲಿಸುವುದು ಹಾಗೂ ರಕ್ಷಿಸುವುದೂ ಅಷ್ಟೇ ಮುಖ್ಯ ಎನ್ನುವ ವಿಷಯವನ್ನು ತಮ್ಮದೇ ಆದ ರೀತಿಯಲ್ಲಿ ವಿವರಿಸಿದ್ದಾರೆ. ರವೀಂದ್ರನಾಥ ಠಾಕೂರ್ ಅವರು ತಮ್ಮ ಪ್ರಸಿದ್ಧ ಕವಿತೆ “ಎಲ್ಲಿ ಮನವು ನಿರ್ಭಯದಿ ತಲೆಯನೆತ್ತಿ ನಿಲುವುದೋ” (“चित्त जेथा भयशून्य उन्नत जतो शिर”) ದಲ್ಲಿ, ಸ್ವತಂತ್ರ ಭಾರತದ ಅಪೇಕ್ಷಿತ ವಾತವರಣದ ವರ್ಣನೆಯನ್ನೇ ಮಾಡಿದ್ದಾರೆ. ಸ್ವಾತಂತ್ರ‍್ಯವೀರ ಸಾವರ್ಕರ್ ಅವರು ತಮ್ಮ ಪ್ರಸಿದ್ಧ ಸ್ವಾತಂತ್ರ‍್ಯದೇವಿಯ ಆರತಿಯಲ್ಲಿ ಸ್ವಾತಂತ್ರ‍್ಯದೇವಿಯ ಆಗಮನದಿಂದ ಶ್ರೇಷ್ಠತೆ, ಉದಾತ್ತತೆ, ಉನ್ನತಿ ಇತ್ಯಾದಿ ಗುಣಗಳು ಭಾರತದಲ್ಲಿ ತನ್ನಿಂತಾನೆ ಹುಟ್ಟಿಕೊಳ್ಳುತ್ತವೆ ಎಂದು ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಮಹಾತ್ಮಾ ಗಾಂಧಿಯವರು ತಮ್ಮ ಹಿಂದ್ ಸ್ವರಾಜ್‌ದಲ್ಲಿ ತಮ್ಮ ಕಲ್ಪನೆಯ ಸ್ವತಂತ್ರ ಭಾರತವನ್ನು ಚಿತ್ರಿಸಿದ್ದಾರೆ. ಅದೇ ರೀತಿ ಡಾ|| ಬಾಬಾಸಾಹೇಬ್ ಅಂಬೇಡ್ಕರ್ ಅವರು ದೇಶದ ಸಂಸತ್ತಿನಲ್ಲಿ ಸಂವಿಧಾನವನ್ನು ಮಂಡಿಸುವ ಸಮಯದಲ್ಲಿ ಮಾಡಿದ ಎರಡು ಭಾಷಣಗಳಲ್ಲಿ ಭಾರತವು ಗಳಿಸಿರುವ ಈ ಸ್ವಾತಂತ್ರ‍್ಯದ ಉದ್ದೇಶ ಮತ್ತು ಅವು ಸಫಲಗೊಳ್ಳಲು ನಾವು ನಿರ್ವಹಿಸಬೇಕಿರುವ ಕರ್ತವ್ಯಗಳನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ.
ಹೀಗಾಗಿ, ನಮ್ಮ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಈ ಆನಂದ ಮತ್ತು ಉತ್ಸಾಹದ ಪುಣ್ಯ ಪರ್ವದಲ್ಲಿ, ಹರ್ಷೋಲ್ಲಾಸದಿಂದ ವಿಧವಿಧವಾದ ಕಾರ್ಯಕ್ರಮಗಳನ್ನು ನಡೆಸುವ ಜೊತೆಜೊತೆಗೇ, ನಾವು ಅಂತರ್ಮುಖಿಗಳಾಗಿ ಮತ್ತೊಂದು ವಿಚಾರವನ್ನೂ ಮಾಡಬೇಕು. ಅದೇನೆಂದರೆ, ಭಾರತದ ಜನಜೀವನದಲ್ಲಿ ‘ಸ್ವ’-ತ್ವದ ಅಭಿವ್ಯಕ್ತಿಯನ್ನು ಮೂಡಿಸುವುದೇ ನಮ್ಮ ಸ್ವಾತಂತ್ರ‍್ಯದ ಉದ್ದೇಶವಾಗಿದ್ದಲ್ಲಿ, ಭಾರತದ ‘ಸ್ವ’-ತ್ವ ಯಾವುದು? ಭಾರತವು ಜಗತ್ತಿಗೆ ಕೊಡುಗೆಯನ್ನು ನೀಡುವಂತಾಗಲು, ನಾವು ಭಾರತವನ್ನು ಯಾವ ರೀತಿಯಲ್ಲಿ ಶಕ್ತಿಶಾಲಿಯನ್ನಾಗಿಸಬೇಕು? ಈ ಕಾರ್ಯವನ್ನು ಪೂರೈಸಲು ನಾವು ನಿರ್ವಹಿಸಬೇಕಾದ ಕರ್ತವ್ಯಗಳು ಯಾವುವು? ಇದನ್ನು ನಿರ್ವಹಿಸಲು ಸಮಾಜವನ್ನು ಯಾವ ರೀತಿಯಲ್ಲಿ ಸಿದ್ಧಗೊಳಿಸಬೇಕು? ನಮ್ಮ ಪ್ರಾಣಪ್ರಿಯ ದೇಶದ ಯುಗಾದರ್ಶಗಳು ಮತ್ತು ಅದಕ್ಕೆ ಅನುಗುಣವಾದ ಯುಗಸ್ವರೂಪವನ್ನು ನಿರ್ಮಿಸುವ ಉದ್ದೇಶದಿಂದ, ನಾವು ಅಪಾರ ಶ್ರಮವನ್ನು ಸುರಿದು ೧೯೪೭ ರಲ್ಲಿ ಭಾರತವನ್ನು ಸ್ವತಂತ್ರಗೊಳಿಸಿದೆವು. ಆ ಕಾರ್ಯೋದ್ದೇಶವನ್ನು ಪೂರ್ಣಗೊಳಿಸಲು ಅಗತ್ಯವಾದ ಚಿಂತನೆ ಮತ್ತು ನಮ್ಮೆಲ್ಲರ ಕರ್ತವ್ಯದ ದಾರಿಯನ್ನು ಸ್ಪಷ್ಟಗೊಳಿಸುವ ಆವಶ್ಯಕತೆಯಿದೆ.
ಭಾರತದೇಶದ ಸನಾತನ ದೃಷ್ಟಿ, ಚಿಂತನೆ, ಸಂಸ್ಕೃತಿ ಮತ್ತು ನಡವಳಿಕೆಯ ಮೂಲಕ ವಿಶ್ವಕ್ಕೆ ಅದು ನೀಡುವ ಸಂದೇಶಗಳ ವಿಶೇಷವೇನೆಂದರೆ, ಆ ಎಲ್ಲ ಸಂದೇಶಗಳೂ ಪ್ರತ್ಯಕ್ಷ ಅನುಭವವನ್ನು ಆಧರಿಸಿದೆ ಮತ್ತು ವೈಜ್ಞಾನಿಕವಾದುದಾಗಿವೆ, ಸತ್ಯಾಧಾರಿತವಾದ ಸಮಗ್ರ ಹಾಗೂ ಏಕಾತ್ಮವಾದ ಎಲ್ಲವನ್ನೂ ಅದು ತನ್ನಲ್ಲಿ ಒಳಗೊಂಡಿದೆ. ವೈವಿಧ್ಯವನ್ನು ಅದು ಪ್ರತ್ಯೇಕತೆಯೆಂದು ಭಾವಿಸುವುದಿಲ್ಲ, ಬದಲಿಗೆ ಏಕತೆಯ ಅಭಿವ್ಯಕ್ತಿ ಎಂದು ತಿಳಿಯುತ್ತದೆ. ಅಲ್ಲಿ ಒಂದಾಗಿರಲು ಸಮಾನವಾಗುವುದು ಅನುಚಿತ. ಎಲ್ಲರಿಗೂ ಒಂದೇ ರೀತಿಯ ಬಣ್ಣ ಬಳಿಯುವುದು, ಅವರನ್ನು ತಮ್ಮ ಬೇರುಗಳಿಂದ ದೂರ ಮಾಡುವುದು, ಇತ್ಯಾದಿ ಹಂಚಿಕೆಗಳು ಜಗಳವನ್ನು ಹುಟ್ಟುಹಾಕುತ್ತದೆ. ತಮ್ಮತಮ್ಮ ವೈಶಿಷ್ಟ್ಯವನ್ನು ಕಾಪಾಡಿಕೊಂಡೇ, ಬೇರೆಯವರ ವಿಶಿಷ್ಟತೆಗೆ ಗೌರವ ನೀಡುತ್ತಾ, ಎಲ್ಲರನ್ನೂ ಏಕಸೂತ್ರದಲ್ಲಿ ಪೋಣಿಸುವ ಮೂಲಕ ಸಂಘಟಿತ ಸಮಾಜದ ರೂಪದಲ್ಲಿ ಎದ್ದುನಿಲ್ಲಬಹುದಾಗಿದೆ. ಭಾರತಮಾತೆಯಲ್ಲಿರುವ ಭಕ್ತಿಯು ನಮ್ಮೆಲ್ಲರನ್ನೂ ಮಕ್ಕಳ ರೂಪದಲ್ಲಿ ಜೋಡಿಸುತ್ತದೆ. ನಮ್ಮ ಸನಾತನ ಸಂಸ್ಕೃತಿಯು ನಮಗೆ ಸುಸಂಸ್ಕೃತ, ಸದ್ಭಾವನೆ ಮತ್ತು ಆತ್ಮೀಯ ನಡವಳಿಕೆಯ ಗುಣವನ್ನು ನೀಡಿದೆ. ಮನದ ಪಾವಿತ್ರ‍್ಯತೆಯಿಂದ ಹಿಡಿದು, ಪರಿಸರದ ಶುದ್ಧತೆಯವರೆಗೆ ಎಲ್ಲವನ್ನೂ ವೃದ್ಧಿಸುವ ಜ್ಞಾನವನ್ನು ಅದು ನೀಡುತ್ತದೆ. ಪ್ರಾಚೀನ ಕಾಲದಿಂದಲೂ ನಮ್ಮ ಸ್ಮೃತಿಗಳು ನಮ್ಮೆಲ್ಲರಿಗೂ ಸಮಾನ ಪರಾಕ್ರಮಿ ಶೀಲಸಂಪನ್ನ ಪೂರ್ವಜರ ಆದರ್ಶದ ಮಾರ್ಗದರ್ಶನವನ್ನು ನಮಗೆ ನೀಡುತ್ತಾ ಬಂದಿದೆ.
ನಾವು ಈ ಸಮಾನ ಶ್ರದ್ಧೆಯನ್ನು ನಮ್ಮದಾಗಿಸಿಕೊಂಡು, ನಮ್ಮ ವೈಶಿಷ್ಟö್ಯಗಳನ್ನು ಕಾಪಾಡಿಕೊಳ್ಳುತ್ತ, ನಮ್ಮಲ್ಲಿರುವ ಅನೇಕ ರೀತಿಯ ಸಂಕುಚಿತ ಸ್ವಾರ್ಥ, ಭೇದಭಾವದಂತಹ ದುರ್ಗುಣಗಳನ್ನು ಸಂಪೂರ್ಣವಾಗಿ ತ್ಯಜಿಸಿ, ದೇಶಹಿತವೊಂದನ್ನೇ ನಮ್ಮೆಲ್ಲಾ ಚಟುವಟಿಕೆಗಳ ಆಧಾರವಾಗಿಟ್ಟುಕೊಳ್ಳಬೇಕು. ನಾವು ಈ ರೀತಿಯಲ್ಲಿ ಸಂಪೂರ್ಣ ಸಮಾಜವನ್ನು ಕಟ್ಟಿ ನಿಲ್ಲಿಸಬೇಕಾದುದು ಇಂದಿನ ಸಮಯದ ಕರೆಯಾಗಿದೆ ಮತ್ತು ಸಮಾಜದ ಸ್ವಾಭಾವಿಕ ಸ್ಥಿತಿಯೂ ಆಗಿದೆ.
ಅತ್ಯಂತ ಪ್ರಾಚೀನವಾದ ನಮ್ಮ ಸಮಾಜದಲ್ಲಿ, ಕಾಲದ ಪ್ರವಾಹದಲ್ಲಿ ಅನೇಕ ಅನಿಷ್ಟ ಪದ್ಧತಿಗಳು ಸೇರಿಕೊಂಡಿವೆ; ಜಾತಿ, ಪಂಥ, ಭಾಷೆ, ಪ್ರಾಂತ, ಇತ್ಯಾದಿಗಳ ಹೆಸರಿನಲ್ಲಿ ಭೇದಭಾವ; ಕೀರ್ತಿ ಮತ್ತು ಹಣದ ಆಸೆಯಿಂದ ಹುಟ್ಟುವ ಕ್ಷುದ್ರ ಸ್ವಾರ್ಥ, ಇತ್ಯಾದಿಗಳನ್ನು ಸಂಪೂರ್ಣವಾಗಿ ನಮ್ಮ ಮನಸ್ಸು-ಮಾತು-ಕ್ರಿಯೆಗಳಿಂದ ಉಚ್ಚಾಟಿಸಲು, ಪ್ರಶಿಕ್ಷಣದ ಜೊತೆಜೊತೆಗೆ, ನಮ್ಮ ಉತ್ತಮ ನಡವಳಿಕೆಯ ಮೂಲಕ ನಾವೇ ಸ್ವತಃ ಉದಾಹರಣೆಯಾಗಿ ಎಲ್ಲರೆದುರು ನಿಲ್ಲುವ ಅಗತ್ಯವೂ ಇದೆ. ನಮ್ಮ ಸ್ವಾತಂತ್ರ‍್ಯದ ರಕ್ಷಣೆಯ ಶಕ್ತಿ ಇರುವುದು ಸಮರ್ಥವಾದ ಮತ್ತು ಶೋಷಣಮುಕ್ತವಾದ ಸಮಾಜದಲ್ಲಿ ಮಾತ್ರ.
ಸಮಾಜದಲ್ಲಿ ಗೊಂದಲವೆಬ್ಬಿಸಿ ಅಥವಾ ಪ್ರಚೋದಿಸಿ ಅಥವಾ ತಮ್ಮತಮ್ಮಲ್ಲಿಯೇ ಕಿತ್ತಾಡುವಂತೆ ಮಾಡುವ ಮೂಲಕ ತಮ್ಮ ಸ್ವಾರ್ಥಸಾಧನೆಯ ಉದ್ದೇಶವನ್ನು ಹೊಂದಿರುವ ಷಡ್ಯಂತ್ರಕಾರಿ ಶಕ್ತಿಗಳು ದೇಶದ ಒಳಗೂ ಮತ್ತು ಹೊರಗೂ ಸಕ್ರಿಯವಾಗಿವೆ. ಅವರಿಗೆ ಕಿಂಚಿತ್ತೂ ಅವಕಾಶ ನೀಡದಂತೆ ಸದಾ ಜಾಗೃತವಾಗಿರುವ, ಸುಸಂಘಟಿತವಾಗಿರುವ, ಸಮರ್ಥವಾಗಿರುವ ಸಮಾಜವೇ ಆರೋಗ್ಯಕರ ಸಮಾಜವೆನಿಸಿಕೊಳ್ಳುತ್ತದೆ. ತಮ್ಮ ನಡುವೆ ಸದ್ಭಾವನೆಯ ಭಾವನೆಯನ್ನು ಹೊಂದಿರುವುದರ ಜೊತೆಗೆ, ಸಮಾಜದಲ್ಲಿ ನಿತ್ಯ ಪರಸ್ಪರ ಸಂಪರ್ಕ ಮತ್ತು ನಿತ್ಯ ಪರಸ್ಪರ ಸಂವಾದವನ್ನು ಪುನಃ ಸಂಸ್ಥಾಪಿಸುವ ಅಗತ್ಯವಿದೆ.
ಸ್ವತಂತ್ರ ಮತ್ತು ಪ್ರಜಾತಾಂತ್ರಿಕ ದೇಶದಲ್ಲಿ ನಾಗರಿಕರು ತಮ್ಮ ಪ್ರತಿನಿಧಿಗಳನ್ನು ಚುನಾಯಿಸಬೇಕಾಗುತ್ತದೆ. ದೇಶದ ಸಮಗ್ರ ಹಿತ, ಅಭ್ಯರ್ಥಿಗಳ ಯೋಗ್ಯತೆ ಮತ್ತು ಪಕ್ಷಗಳ ವಿಚಾರಧಾರೆ, ಇವುಗಳೆಲ್ಲವನ್ನೂ ಸಮನ್ವಯಗೊಳಿಸುವ ವಿವೇಕ; ಕಾನೂನು, ಸಂವಿಧಾನ ಮತ್ತು ನಾಗರಿಕ ಅನುಶಾಸನಗಳ ಸಾಮಾನ್ಯ ಜ್ಞಾನ ಮತ್ತು ಅವುಗಳನ್ನು ಶ್ರದ್ಧೆಯಿಂದ ಪಾಲಿಸುವ ಸ್ವಭಾವ, ಇವುಗಳು ಪ್ರಜಾತಾಂತ್ರಿಕ ರಚನೆಯ ಸಫಲತೆಗೆ ಅತ್ಯಾವಶ್ಯಕವಾದ ಪೂರ್ವಶರತ್ತಾಗಿರುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ರೀತಿಯ ಸದ್ಗುಣಗಳು ನಾಶವಾಗಿವೆ. ರಾಜಕೀಯ ಕುತಂತ್ರಗಳ ಕಾರಣದಿಂದ ಆಗಿರುವ ಸವೆತಗಳು ನಮ್ಮ ಕಣ್ಣ ಮುಂದಿವೆ. ತಮ್ಮ ನಡುವೆ ಇರುವ ವಿವಾದಗಳಲ್ಲಿ ತಮ್ಮ ವೀರತೆಯನ್ನು ಸಿದ್ಧಪಡಿಸಲು ಮಾತಿನ ಅಸಂಯಮ ತೋರುವುದು ಪ್ರಮುಖ ಕಾರಣವಾಗಿದೆ. (ಈಗ ಸಮಾಜ ಮಾಧ್ಯಮದಲ್ಲಿ ಶಿಷ್ಟಾಚಾರವೆಂದು ಎನಿಸಲ್ಪಡುತ್ತಿದೆಯೋ, ಅದು). ನಾಯಕರನ್ನೂ ಒಳಗೊಂಡಂತೆ ನಾವೆಲ್ಲರೂ ಈ ರೀತಿಯ ನಡವಳಿಕೆಗಳಿಂದ ದೂರವಾಗಿ, ನಾಗರಿಕತೆಗೆ ಆವಶ್ಯಕವಾದ ಅನುಶಾಸನ ಮತ್ತು ಕಾನೂನು ಸುವ್ಯವಸ್ಥೆಯನ್ನು ಪಾಲಿಸುವ ಮೂಲಕ ಗೌರವಪೂರ್ಣ ವಾತಾವರಣ ನಿರ್ಮಿಸಬೇಕಿದೆ.
ಈ ರೀತಿಯಲ್ಲಿ ನಮ್ಮನ್ನು ನಾವು ಮತ್ತು ಸಂಪೂರ್ಣ ಸಮಾಜವನ್ನು ಯೋಗ್ಯರನ್ನಾಗಿಸಿಕೊಳ್ಳುವುದರ ಮೂಲಕ ಜಗತ್ತಿನಲ್ಲಿ ಪರಿವರ್ತನೆ ಸಾಧ್ಯವೇ ಹೊರತು, ಬೇರಾವ ಮಾರ್ಗದಿಂದಲೂ ಯಶಸ್ಸು ಸಾಧ್ಯವಿಲ್ಲ. ‘ಸ್ವ’-ತ್ವದ ಆಧಾರದ ಮೇಲೆ ನಮ್ಮ ಸ್ವತಂತ್ರ ದೇಶದ ಯುಗಾನುಕೂಲ ವ್ಯವಸ್ಥೆಯನ್ನು ಹಾಗೂ ಪ್ರಚಲಿತ ವ್ಯವಸ್ಥೆಯನ್ನು ದೇಶಾನುಕೂಲವಾಗಿ ಸ್ವೀಕಾರವಾಗುವಂತೆ ಮಾಡಬೇಕು. ಸಮಾಜದಲ್ಲಿ ‘ಸ್ವ’-ತ್ವದ (ತನ್ನತನ) ಕುರಿತು ಸ್ಪಷ್ಟಜ್ಞಾನ, ವಿಶುದ್ಧ ದೇಶಭಕ್ತಿ, ವೈಯಕ್ತಿಕ ಹಾಗೂ ರಾಷ್ಟ್ರೀಯ ಅನುಶಾಸನ ಮತ್ತು ಏಕಾತ್ಮತೆ, ಈ ರೀತಿಯ ನಾಲ್ಕು ಸಾಮರ್ಥ್ಯಗಳನ್ನು ಪಡೆದುಕೊಳ್ಳಬೇಕು. ಆಗಲೇ ಭೌತಿಕ ಜ್ಞಾನ, ಕೌಶಲ್ಯ ಮತ್ತು ಗುಣಮಟ್ಟ, ಆಡಳಿತ ಮತ್ತು ಶಾಸನಗಳ ಅನುಕೂಲತೆ, ಇತ್ಯಾದಿಗಳು ಸಹಾಯಕವಾಗುತ್ತವೆ.
ಹೀಗಾಗಿ, ಸ್ವಾತಂತ್ರ‍್ಯದ ಅಮೃತ ಮಹೋತ್ಸವವು ನಮ್ಮೆಲ್ಲರಿಗೂ ನಮ್ಮ ಕಠೋರ ಹಾಗೂ ಸತತ ಪರಿಶ್ರಮದಿಂದ ಸಾಧಿಸಿರುವ ಆ ಸ್ಥಿತಿಯ ಉತ್ಸವವಾಗಿದೆ. ಇದರಲ್ಲಿ ಸಂಕಲ್ಪಬದ್ಧರಾಗಿ, ಅಷ್ಟೇ ತ್ಯಾಗ ಹಾಗೂ ಪರಿಶ್ರಮದಿಂದ, ನಾವು ‘ಸ್ವ’-ತ್ವ ಆಧಾರಿತ ಯುಗಾನುಕೂಲ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ಭಾರತವನ್ನು ಪರಮವೈಭವ ಸ್ಥಿತಿಗೆ ಕೊಂಡೊಯ್ಯಬೇಕು. ಬನ್ನಿ, ಆ ತಪೋಮಾರ್ಗದಲ್ಲಿ ಹರ್ಷೋಲ್ಲಾಸದಿಂದ ಸಂಘಟಿತ, ಸ್ಪಷ್ಟ ಮತ್ತು ದೃಢಭಾವದಿಂದ ನಾವು ನಮ್ಮ ವೇಗವನ್ನು ಹೆಚ್ಚಿಸೋಣ.
– ಡಾ|| ಮೋಹನ ಭಾಗವತ್
ಸರಸಂಘಚಾಲಕ, ರಾಷ್ಟ್ರೀಯ ಸ್ವಯಂಸೇವಕ ಸಂಘ