Quantcast
Channel: Samvada
Viewing all articles
Browse latest Browse all 3435

ಪ್ರಜಾತಂತ್ರದ ಮೂಲದ್ರವ್ಯ ಭಾರತದ ಮಣ್ಣಿನಲ್ಲಿಯೇ ಇದೆ

$
0
0

ನನಗಿನ್ನೂ ಆ ದಿನ, ಆ ದಿನಗಳು ಚೆನ್ನಾಗಿ ನೆನಪಿವೆ. 46 ವರ್ಷಗಳ ಹಿಂದೆ, ಅಂದರೆ, 1975ರ ಜೂನ್ 26ರ ಬೆಳಿಗ್ಗೆ ಇಂದಿರಾ ಗಾಂಧಿಯವರು ಮಾಡಿದ್ದ ರೇಡಿಯೋ ಭಾಷಣವೂ  ನೆನಪಿದೆ. ತುರ್ತುಪರಿಸ್ಥಿತಿಯ  ಘೋಷಣೆಯನ್ನು ಸಮರ್ಥಿಸಿಕೊಂಡರಾದರೂ ಅವರ ಧ್ವನಿ ನಡುಗುತ್ತಿತ್ತು. ಅನಂತರದ್ದು ಇತಿಹಾಸ. ತುರ್ತು ಪರಿಸ್ಥಿತಿಯ ಬಹು ಆಯಾಮಗಳ ಆಘಾತಗಳ    ಬಗೆಗೆ ಎಷ್ಟು ಬೇಕಾದರೂ ಬರೆಯಬಹುದು. ಅದು ಮುಗಿಯದಂತಹ ಸರಕು. ಅನಂತರ ನಡುಗಿದ್ದು ಪ್ರಜಾಪ್ರಭುತ್ವ!!

ನನಗೆ ತುಂಬಾ ವ್ಯಥೆ ಉಂಟು ಮಾಡಿದುದು  ಎಂದರೆ,  ಅಪರಿಮಿತ  ಅಧಿಕಾರವನ್ನು ತಮ್ಮ  ಕೈಗೆ ತೆಗೆದುಕೊಂಡಿದ್ದ ಮತ್ತು  ವಿರೋಧ ಪಕ್ಷಗಳನ್ನು ತುಳಿದೇ ಹಾಕಿದ್ದ ಇಂದಿರಾ ಅವರು  ಮನಸ್ಸು ಮಾಡಿದ್ದರೆ, ತುರ್ತುಪರಿಸ್ಥಿತಿಯ ತಮ್ಮ ನಿರಂಕುಶ ಆಳ್ವಿಕೆಯಲ್ಲಿ ದೇಶದ  ಪ್ರಗತಿ, ಅಭಿವೃದ್ಧಿಗಳನ್ನು  ನಿಜವಾಗಿಯೂ ಸಾಧಿಸಬಹುದಿತ್ತು,  ವಾಗ್ದಾನ ನೀಡಿದ್ದಂತೆ “ಗರೀಬೀ ಹಟಾವ್ ” ಮಾಡಬಹುದಿತ್ತು. ಏನೂ ಮಾಡಲಿಲ್ಲ. ಏನೇನೂ ಮಾಡಲಿಲ್ಲ. ಆ ಕರಾಳ ಅವಧಿಯಲ್ಲಿ  ಪೊಲೀಸರ, ಅಧಿಕಾರಶಾಹಿಯ, ತೆರಿಗೆ ಅಧಿಕಾರಿಗಳ ದಮನಚಕ್ರ ಮಾತ್ರವೇ ಉರುಳುತ್ತಿತ್ತು. ಅಧಿಕಾರಿಗಳು ಆಡಿದ್ದೇ ಆಟ. ಹಾಗೆ ನೋಡಿದರೆ, ಹತ್ತು  ವರ್ಷಗಳಲ್ಲಿ  ಮಾಡಬಹುದಾದ ದೇಶಾಭಿವೃದ್ಧಿಯ  ಕೆಲಸವನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ, ಎರಡೇ ವರ್ಷಗಳಲ್ಲಿ ಮುಗಿಸಿಬಿಡಬಹುದಿತ್ತು. ಸತ್ಯಸಂಗತಿಯೇನೆಂದರೆ, ಇಂದಿರಾ ಮತ್ತು ಅವರ ಪಟಾಲಮ್ಮಿಗೆ ಅಭಿವೃದ್ಧಿಯ ಕಡೆ ಯಾವ ಗಮನವೂ  ಇರಲಿಲ್ಲ, ಅವರ ಕಣ್ಮುಂದೆ   ಒಳ್ಳೆಯ ಕೆಲಸ ಮಾಡುವ  ಯಾವುದೇ  ಗುರಿ – ಉದ್ದೇಶಗಳೇ   ಇರಲಿಲ್ಲ.  ಅನೇಕ ಹಿರಿಯ ಪತ್ರಕರ್ತರು, ಇತಿಹಾಸಕಾರರು ಈ ವಾಸ್ತವವನ್ನು  ದಾಖಲಿಸಲು “ಮರೆತದ್ದು”  ನೋವಿನ ಸಂಗತಿ. 

  1977ರ ಮಾರ್ಚ್ ತಿಂಗಳಲ್ಲಿ ಅಂದಿನ ಆಂತರಿಕ ತುರ್ತುಪರಿಸ್ಥಿತಿ ತೆಗೆಯಲ್ಪಟ್ಟು ಪ್ರಜಾತಂತ್ರ ಮತ್ತೆ ಅರಳುವಂತಾಯಿತು.   ನಮ್ಮ ಮಣ್ಣಿನಲ್ಲಿರುವ ಗಣತಂತ್ರದ ಮೂಲದ್ರವ್ಯ  ಸಹಜವಾಗಿಯೇ ನನ್ನಲ್ಲಿ ಪ್ರತಿಬಾರಿ ಬೆರಗು ಉಂಟುಮಾಡುತ್ತದೆ. . ಅದು ನಮ್ಮ ರಕ್ತದಲ್ಲಿಯೇ ಇದೆ. ಒಂದು ಕಾನೂನು, ಒಂದು ವಿಧಿ ಜಾರಿಯಾಗಲು ಮತ್ತು ಹಾಗೆ ಜಾರಿಯಾಗಿ ಯಶಸ್ವಿಯಾಗಲು, ಇಡಿಯ ಜನಪದದ ನರನಾಡಿಗಳಲ್ಲಿ ಪೂರ್ವಸಿದ್ಧತೆ ಇರಬೇಕಲ್ಲವೇ? ಇಲ್ಲವಾದರೆ ಜನಪದದಲ್ಲಿ ಒಂದು ಬದಲಾವಣೆಯನ್ನು , ಒಂದು ಸಂಚಲನವನ್ನು  ಅಷ್ಟು ಸುಲಭವಾಗಿ ಕಾಣುತ್ತೇವೆಯೇ? ಅಂತಹ ಒಂದು ನವೋನ್ಮೇಷ ವ್ಯವಸ್ಥೆಯು, ಒಂದು ಪಾರಂಪರಿಕ ಮೌಲ್ಯವಾಗಿ ನಮ್ಮ ನಡುವೆ ಉಳಿದುಬಂದಿದ್ದರೆ ಮಾತ್ರ, ಅರ್ಥಪೂರ್ಣವಾಗಿ ನೆಲೆಗೊಳ್ಳಲು ಸಾಧ್ಯ.

ಗಣತಂತ್ರವಾಗಲೀ, ಸ್ವಾತಂತ್ರ್ಯವಾಗಲೀ ಒಂದಕ್ಕೊಂದು ಪೂರಕವಾಗಿ  ಇರುವಂತಹ ಸಾಮಾಜಿಕ ಮೌಲ್ಯಗಳು.  ಸ್ವಾತಂತ್ರ್ಯೋತ್ತರ ಕಾಲಾವಧಿಯ ಸಂಜಾತರಿಗೆ ನಮ್ಮ ಸ್ವಾತಂತ್ರ್ಯ ಸಂಗ್ರಾಮ – ದೇಶವಿಭಜನೆಗಳು ಕೇವಲ  ಅಧ್ಯಯನ ಸಾಮಗ್ರಿಗಳು ಮತ್ತು  ನೇರಾನೇರ  ಅನುಭವಕ್ಕೆ ದಕ್ಕಿರದ ಬಲುದೊಡ್ಡ ಸಂಗತಿಗಳು. ಆದರೆ, ನಮ್ಮೆಲ್ಲರಿಗೆ  ಸ್ವಾತಂತ್ರ್ಯದ ಉನ್ನತ ಮೌಲ್ಯದ ಪರಿಚಯವಾದುದು 1975ರ ಈ  ತುರ್ತುಪರಿಸ್ಥಿತಿಯಿಂದಲೇ. ಆಕ್ರಮಕರ ಮತ್ತು ಬ್ರಿಟಿಷರ ಆಡಳಿತದ ಕ್ರೌರ್ಯಗಳು ಹೇಗಿದ್ದಿರಬಹುದೆಂದು ನಾವು ಊಹಿಸಲು ಸಾಧ್ಯವಾದುದು ಆ ಅವಧಿಯಲ್ಲಿಯೇ. 

ಕಾಂಗ್ರೆಸ್ ಪಕ್ಷವು  “ಸ್ವಾತಂತ್ರ್ಯ ಬಂದುದೇ ತನ್ನಿಂದ” ಎಂದು  ಹೇಳುತ್ತದೆ. ಇಂದಿರಾ ಅವರು ಪ್ರಜಾಪ್ರಭುತ್ವವನ್ನು ಕೊಂದುಹಾಕಿದಾಗ, ನ್ಯಾಯಾಲಯಗಳನ್ನು ಟೀಕಿಸಿದಾಗ, ಹಿರಿಯ ನ್ಯಾಯಾಧೀಶರನ್ನು ಕಡೆಗಣಿಸಿ ತಮ್ಮ “ಪ್ರೀತಿಪಾತ್ರರನ್ನೇ” ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸಿದಾಗ, ಪತ್ರಿಕಾ ಸ್ವಾತಂತ್ರ್ಯವನ್ನು  ಹತ್ತಿಕ್ಕಿದಾಗ, ಸಂಸತ್ತನ್ನು ದುರುಪಯೋಗಪಡಿಸಿಕೊಂಡಾಗ, ಬೇಕಾಬಿಟ್ಟಿಯಾಗಿ ಸಂವಿಧಾನವನ್ನೇ ತಿದ್ದುಪಡಿ ಮಾಡಿದಾಗ, ಇಡೀ ದೇಶದಲ್ಲಿ ಒಬ್ಬನೇ ಒಬ್ಬ ಕಾಂಗ್ರೆಸ್ ಎಂಪಿ, ಎಂಎಲ್‍ಎ ಪ್ರತಿಭಟಿಸಲಿಲ್ಲ, ರಾಜೀನಾಮೆ ಕೊಡಲಿಲ್ಲ. ಬಗ್ಗಿ ಎಂದು ಇಂದಿರಾ ಹೇಳಿದ್ದೇ ತಡ,  ಕಾಲಿಗೆರಗಿದ ಈ ಕಾಂಗ್ರೆಸ್ಸಿಗರು  ಮೇಲೆ ಏಳಲೇ ಇಲ್ಲ. ನಾಲ್ಕು ದಶಕಗಳಿಂದ ಲೇಖಕನಾಗಿ, ಅಂಕಣಕಾರನಾಗಿ ದೇಶದ ರಾಜಕೀಯವನ್ನು – ಸಾಮಾಜಿಕ ಬದಲಾವಣೆಯನ್ನು ಗಮನಿಸುವ ಪ್ರಯತ್ನ ಮಾಡಿದ್ದೇನೆ. ಜನತಂತ್ರ – ಗಣತಂತ್ರಗಳನ್ನು ಉಳಿಸಲು ಒಬ್ಬ ಕಾಂಗ್ರೆಸಿಗನೂ ಮುಂದೆ ಬರಲಿಲ್ಲವಲ್ಲಾ, ಅದೂ ಐತಿಹಾಸಿಕ ಮಹತ್ತ್ವದ ವಿಶೇಷ ಸಂದರ್ಭದಲ್ಲಿ, ಎಂಬುದು ನನಗೆ ಇಂದಿಗೂ ವ್ಯಥೆಯ ವಿಷಯವಾಗಿದೆ.

 “ನಮಗೆ, ನಮ್ಮ ದೇಶಕ್ಕೆ ಆಧುನಿಕವಾದುದು, ಒಳ್ಳೆಯದು ಪಶ್ಚಿಮದಿಂದಲೇ ಬಂದಿದೆ. ಪ್ರಜಾಪ್ರಭುತ್ವ – ಗಣತಂತ್ರಗಳೂ ಅಷ್ಟೆ. ಬ್ರಿಟಿಷರು ನಮ್ಮನ್ನು ಆಳಿದುದರಿಂದಲೇ ಬಂದಿವೆ” ಎನ್ನುವ ವಾದವಿದೆ. ಬ್ರಿಟಿಷ್‍ಪೂರ್ವದ ಅವಧಿಯನ್ನು ಅಂಧಕಾರದ ಅವಧಿ ಎಂದು ನಮ್ಮ “ಬುದ್ಧಿಜೀವಿಗಳು” ದಿನಕ್ಕೊಮ್ಮೆ ನೆನಪಿಸುತ್ತಾರೆ. 

   ನಮ್ಮನ್ನು ಬ್ರಿಟಿಷರು ಆಳಿದುದರಿಂದ ನಮ್ಮ ಆಡಳಿತ ವ್ಯವಸ್ಥೆಯಲ್ಲಿ, ರಾಜಕೀಯ ವ್ಯವಸ್ಥೆಯಲ್ಲಿ ತುಂಬ ಬದಲಾವಣೆಗಳಾದವು. ಆದರೆ ಅವೆಲ್ಲಾ ಅವರ ಅನುಕೂಲಕ್ಕೆ, ಅವರ ಲೂಟಿಗೆ, ಅವರ ವಸಾಹತುಶಾಹಿ  ಸಾಮ್ರಾಜ್ಯದ  ವಿಸ್ತರಣೆ – ಪಾಲನೆಗಳ ಸಲುವಾಗಿ ಅನುಷ್ಠಾನವಾದವು ಎಂಬುದನ್ನೂ ಮರೆಯುವಂತಿಲ್ಲ. ಹಾಗೆಂದೇ, ನಮ್ಮ “ಬುದ್ಧಿಜೀವಿಗಳು” ಎಲ್ಲವನ್ನೂ ಬ್ರಿಟಿಷರ ಮಹೋಪಕಾರವೆಂದು ಬಣ್ಣಿಸುವುದನ್ನು ನೋಡಿದರೆ ಹೇಸಿಗೆಯಾಗುತ್ತದೆ.   

ವಾಲ್ಮೀಕಿ ಮಹರ್ಷಿಗಳ ರಾಮಾಯಣವು  ನಮ್ಮ ಆದಿಕಾವ್ಯ.  ಅದೊಂದು ಅದ್ಭುತ ಕಾವ್ಯ. ಅಂತೆಯೇ ಅದ್ಭುತ ಐತಿಹಾಸಿಕ ಸಾಕ್ಷ್ಯಾಧಾರ ಕೂಡ. ರಾಮನ ಕಥೆಯ ಅವಧಿ ತುಂಬ ಹಿಂದಕ್ಕೆ ಹಿಂದಕ್ಕೆ ಹೋಗುತ್ತದೆ. ಪುಷ್ಪಕ ವಿಮಾನ, ರಾವಣನ ಹತ್ತು ತಲೆಗಳು, ಆಂಜನೇಯನ ಸಮುದ್ರ ಲಂಘನ ಮುಂತಾದ ಕಾವ್ಯಾತ್ಮಕ ಅಂಶಗಳನ್ನು ಹೊರತುಪಡಿಸಿದಾಗ, ರಾಮಾಯಣ ಮಹಾಕಾವ್ಯವು ನೀಡುವ ನಮ್ಮ ಜನಪದದ –  ನಮ್ಮ ಸಂಸ್ಕೃತಿಯ ವಿವರಗಳು, ಜನಜೀವನದ ವಿವರಗಳು ತುಂಬ ಮಹತ್ತ್ವಪೂರ್ಣ ಎನ್ನಿಸುತ್ತವೆ.  ಹಿರಿಯ ಮಗ ಎಂಬ ಅಂಶಗಳಿದ್ದರೂ ಶ್ರೀರಾಮನನ್ನು ಸುಮ್ಮನೇ ಸಿಂಹಾಸನದ ಮೇಲೆ ಕೂರಿಸಿಬಿಡುವುದಿಲ್ಲ. ದಶರಥನು ತನ್ನ ಆಸ್ಥಾನದವರೊಂದಿಗೆ ಸಮಾಲೋಚನೆ ನಡೆಸಿಯೇ ತೀರ್ಮಾನ ಕೈಗೊಳ್ಳುತ್ತಾನೆ. ಆಸ್ಥಾನಿಕರ – ಜನರ ಅಭಿಮತಕ್ಕೆ ನಿಜವಾಗಿಯೂ ಅಲ್ಲಿ ಪ್ರಮುಖಪಾತ್ರವಿರುವುದು ಕಾಣುತ್ತದೆ. ರಾಜನಾಗುವುದಕ್ಕೆ ಮುಂಚೆಯೇ,  ಶ್ರೀರಾಮನು ಜನರ ಕಷ್ಟಸುಖಗಳಲ್ಲಿ ಪಾಲ್ಗೊಂಡು, ಅವರ ಪ್ರೀತಿ ಗೌರವಗಳನ್ನು ಸಂಪಾದಿಸಿರುತ್ತಾನೆ. ಆದಿಕಾವ್ಯದ ಈ ಅಂಶವು ನನಗೆ ತುಂಬ ಮಹತ್ತ್ವದ್ದೆನಿಸಿದೆ. ಕುರುವಂಶದ ಪರಂಪರೆಯಲ್ಲಿಯೂ ರಾಜ್ಯಾಧಿಕಾರವು ಕೇವಲ ಆನುವಂಶಿಕವಾಗಿ ಬರುತ್ತಿರಲಿಲ್ಲ. ಅರ್ಹತೆಯೂ ಮಾನದಂಡವಾಗಿತ್ತು ಎನ್ನುವ ವಿವರಗಳನ್ನು ಸಹ ಇಲ್ಲಿ ನಾವು ನೆನಪಿಡಬೇಕಾಗುತ್ತದೆ. ಇವೆಲ್ಲಾ ಬರಿಯ ಸಾಹಿತ್ಯ ಕೃತಿಗಳು, ಕಥೆ – ಕಗ್ಗ ಎನ್ನಲು ಸಾಧ್ಯವಿಲ್ಲ. ರಾಜನು ಜನಾಭಿಪ್ರಾಯಕ್ಕೆ ಮಾನ್ಯತೆ ನೀಡುತ್ತಿದ್ದ, ಎಂಬ ಕಾವ್ಯಾಂತರ್ಗತ ಅಂಶವೇ ತುಂಬ ವಿಶೇಷವಾದ ಸಂಗತಿ.

 ವೇದಗಳು ಸಹ  ಅಪೂರ್ವ ದಾಖಲೆಗಳೇ. ಅಥರ್ವವೇದವು ಒಂದು ಅಭಿವೃದ್ಧಿ ಹೊಂದಿದ ನಾಗರಿಕತೆಯನ್ನು ಪರಿಚಯಿಸುತ್ತದೆ. ರಾಜ್ಯಭಾರವು ತನ್ನಷ್ಟಕ್ಕೆ ತಾನೇ, ರಾಜನಿಂದ ಅವನ ಮಗನಿಗೆ ವರ್ಗಾವಣೆಯಾಗುತ್ತಿರಲಿಲ್ಲ. ಅಥರ್ವ ವೇದ (3.4.2) ಮತ್ತು ಋಗ್ವೇದದ (10.124.8) ಮಂತ್ರಗಳು “ಜನರು ಅಥವಾ ಪ್ರತಿನಿಧಿಗಳು ರಾಜನನ್ನು ಆರಿಸುತ್ತಿದ್ದರು” ಎಂದು ಸೂಚಿಸುತ್ತವೆ. ಋಗ್ವೇದದ (7.12.1) ಮಂತ್ರದಲ್ಲಿ ತಿಳಿಸಿರುವಂತೆ ರಾಜನು ಸಭೆ ಮತ್ತು ಸಮಿತಿ ಎರಡೂ ಕಡೆಗಳಲ್ಲಿ ಜನರ ಪ್ರತಿನಿಧಿಗಳೊಂದಿಗೆ ವಿಚಾರ ವಿನಿಮಯ ಮಾಡುತ್ತಿದ್ದನು. ಅಥರ್ವ ವೇದದ (6.64) ಸೂಕ್ತವೊಂದು “ಎಲ್ಲ ವಿಷಯಗಳ ಬಗ್ಗೆ ಒಂದು ಸರ್ವಾನುಮತದ ನಿರ್ಣಯಕ್ಕೆ ದಾರಿ ಮಾಡಿಕೊಡುವ ವ್ಯಾಪಕ ಚರ್ಚೆಗಳು” ನಡೆಯಬೇಕೆಂದು ಕರೆಕೊಡುತ್ತದೆ. 

 ಅಥರ್ವವೇದದ ಇನ್ನೊಂದು ಸೂಕ್ತ(3.3)ವು, ಅಧಿಕಾರದಿಂದ ತೆಗೆದುಹಾಕಲ್ಪಟ್ಟ ಒಬ್ಬ ರಾಜನಿಗೆ, ಪ್ರಜೆಗಳು ಮರಳಿ ಅಧಿಕಾರ ನೀಡಬಹುದು, ಎಂದು ತಿಳಿಸುತ್ತದೆ. ಇದು ಸಹ ನನಗೆ ತುಂಬ ಮಹತ್ತ್ವದ್ದೆನಿಸಿದೆ.

 ಮೇಲ್ಕಂಡ ವಿವರಣೆಗೆ, ಸನಿಹವಾದ ಮತ್ತು ಮೌರ್ಯರಿಗಿಂತ ಮೊದಲಿನ ಸಂಘ ಅಥವಾ ಗಣದ ಉದಾಹರಣೆಯೆಂದರೆ, ವೈಶಾಲಿಯ ಲಿಚ್ಛವಿಗಳದ್ದು. ಬಿಹಾರ್ ಪ್ರಾಂತದ ಮುಜಫರಪುರ  ಜಿಲ್ಲೆಯ ಇಂದಿನ ಬಸಾರ್ ಪ್ರದೇಶದಲ್ಲಿಯೇ ಈ ಗಣರಾಜ್ಯವಿತ್ತು. ಅಷ್ಟೇನೂ ಪ್ರಸಿದ್ಧವಲ್ಲದ ಉಳಿದ ಗಣಗಳೆಂದರೆ ಕುಶೀನಾರಾದ ಮಲ್ಲರು, ಇಂದಿನ ನೇಪಾಳದ ತಪ್ಪಲು ಬಳಿಯ ಪಾವಾಗಳು, ಇಂದಿನ ಸೌರಾಷ್ಟ್ರ ಪ್ರಾಂತದ ಅಂಧಕ – ವೃಷ್ಣಿ ಮುಂತಾದವರು ಮಾಡಿಕೊಂಡಿದ್ದ ಗಣರಾಜ್ಯಗಳು. ಪಾಳಿ ಮತ್ತು ಸಂಸ್ಕೃತ ಭಾಷೆಗಳಲ್ಲಿ ಉಪಲಬ್ಧವಾಗಿರುವ ಅನೇಕ ಬೌದ್ಧ ಗ್ರಂಥಗಳ ಪ್ರಾಮಾಣಿಕ ಪಾಠಗಳ (Texts) ಆಧಾರದ ಮೇಲೆ ತಿಳಿಯುವುದೆಂದರೆ, ಲಿಚ್ಛವಿಗಳ ಸಂವಿಧಾನವು ಏಕಾತ್ಮಕ ಗಣತಂತ್ರ ಸ್ವರೂಪದ್ದಾಗಿತ್ತು. ಕಾರ್ಯಾಂಗದ ಅಧಿಪತಿಯಾಗಿ ಒಬ್ಬ ‘ಸೇನಾಪತಿ’ ಇರುತ್ತಿದ್ದ. ಆಳುವ ಕ್ಷತ್ರಿಯರನ್ನೊಳಗೊಂಡ ಪರಮಾಧಿಕಾರವುಳ್ಳ ಸಭೆಯಿತ್ತು. ಗಣತಂತ್ರದ ಆಜ್ಞೆಗಳನ್ನು ‘ಸೇನಾಪತಿ’ ಹಾಗೂ ‘ಗಣ’ಗಳ ಸಂಯುಕ್ತ ಹೆಸರಿನಲ್ಲಿ ಹೊರಡಿಸಲಾಗುತ್ತಿತ್ತು. ‘ಸಂತಾಗಾರ’ದಲ್ಲಿ ಸಭೆಗಳು ಸೇರುತ್ತಿದ್ದವು. ಅದು ತನ್ನ ಉಚ್ಛ್ರಾಯ ಕಾಲದಲ್ಲಿ ಆಗಾಗ ನಡೆಸುತ್ತಿದ್ದ ದೀರ್ಘ ಅಧಿವೇಶನಗಳು ತುಂಬ ಪ್ರಸಿದ್ಧವಾಗಿದ್ದವು. ಈ ಸಭೆಗೆ ‘ಸೇನಾಪತಿ’ಯನ್ನು ಆರಿಸುವ ಸಂಪೂರ್ಣ ಅಧಿಕಾರವಿತ್ತು.

ಮುಂದೆ ಸಾಮ್ರಾಜ್ಯವಾದವು ಈ ಎಲ್ಲ ಗಣತಂತ್ರಗಳನ್ನು ಅಳಿಸಿಹಾಕಿತು. ಅಂತಹ ಸಾಮ್ರಾಜ್ಯವಾದವು ಯೂರೋಪಿನಲ್ಲೂ ತುಂಬ ಬದಲಾವಣೆಗಳಿಗೆ ಕಾರಣವಾಯಿತು.

ಅದೇನೇ ಇರಲಿ, ಪ್ರಜಾಪ್ರಭುತ್ವ, ಗಣತಂತ್ರ, ಜನಾಭಿಪ್ರಾಯ, ಅಭಿಮತಗಳೆಂಬ ಮೂಲದ್ರವ್ಯಗಳು  ನಮ್ಮ ಪರಂಪರೆಯಲ್ಲಿ ಅನೇಕ ಸಾವಿರ ವರ್ಷಗಳಿಂದಲೂ ಹಾಸು ಹೊಕ್ಕಾಗಿರುವುದನ್ನು ಗಮನಿಸಬಹುದು. ಒಂದೂರಿನಲ್ಲಿ ಒಬ್ಬ ರಾಜನಿದ್ದನು ಎಂಬಂತಹ ಕತೆಗಳು ನಮ್ಮ ಸಾಹಿತ್ಯ ಪರಂಪರೆಯಲ್ಲಿ ಎಷ್ಟೇ ಇದ್ದರೂ, ಸ್ವಾತಂತ್ರ್ಯಾನಂತರ ಸರದಾರ ವಲ್ಲಭಬಾಯಿ ಪಟೇಲರ ಒಂದು ಗರ್ಜನೆಯು ಎಲ್ಲ ಅರಸೊತ್ತಿಗೆಗಳನ್ನೂ,  ನವಾಬ – ಸುಲ್ತಾನರನ್ನೂ ಇತಿಹಾಸದ ಮುಗಿದ ಅಧ್ಯಾಯಕ್ಕೆ ಸೇರಿಸಿಬಿಟ್ಟಿತು. ಇದು ಸಾಧ್ಯವಾದುದು ಮತ್ತು  ಪ್ರಜಾತಂತ್ರವು ಊರ್ಜಿತವಾದುದು, ಈ ಮಣ್ಣಿನ ವೈಶಿಷ್ಟ್ಯದಿಂದಲೇ. ಈ ಮಹತ್ತ್ವದ ಅಂಶವ ನ್ನು ಮತ್ತೆ ಮತ್ತೆ ನಾವು ಸಮರ್ಪಕವಾಗಿ ಅನುಸಂಧಾನ ಮಾಡಿಕೊಂಡಾಗ ಮಾತ್ರ ಭಾರತದ ವೈಶಿಷ್ಟ್ಯವು  ಸರಿಯಾಗಿ ಅರ್ಥವಾಗುತ್ತದೆ. 

ಸಂವಿಧಾನ – ಸಂಸತ್ತು – ಜನತಂತ್ರಗಳ ಮಾತು ಬಂದಾಗಲೆಲ್ಲಾ  ಬುದ್ಧಿಜೀವಿಗಳು, ಬ್ರಿಟಿಷರನ್ನು ಹೊಗಳಿ ಹಾಡುತ್ತಾರೆ.  ಅದೇಕೋ, ಬ್ರಿಟಿಷರ ಬಗೆಗೆ ಕೇಳುವಾಗ, ಅವರು ಇನ್ನೂ ಉಳಿಸಿಕೊಂಡಿರುವ ಅರಸೊತ್ತಿಗೆಯು ಹಾಸ್ಯಾಸ್ಪದವಾಗಿ ಕಾಣುತ್ತದೆ. ಎಲಿಜಬೆತ್ ರಾಣಿ ಮತ್ತು ಅವಳ ಮಗ ಪೆದ್ದುಮುಖದ ಪ್ರಿನ್ಸ್ ಚಾರ್ಲ್ಸ್  ನೆನಪಾಗಿ ಪ್ರತಿಬಾರಿ ನನಗೆ ನಗು ಉಕ್ಕಿಬರುತ್ತದೆ.

 ಅನೇಕ  ದೋಷಗಳ ನಡುವೆಯೂ, ನಮ್ಮ ಭಾರತೀಯ ಪಾರಂಪರಿಕ  ವ್ಯವಸ್ಥೆಯ  ಜನತಂತ್ರದ  ಪರಿಕಲ್ಪನೆಯು  ಉಳಿದುಕೊಂಡಿರುವುದು ತುಂಬ ವಿಶೇಷ ಸಾಧನೆಯಾಗಿ ಕಾಣುತ್ತದೆ. ನಮ್ಮ ನೆರೆಹೊರೆಯ ತುಂಬ ದೇಶಗಳು ಸೇನಾ  ಸರ್ವಾಧಿಕಾರಿಗಳ ಕೈಲಿ – ಕಮ್ಯೂನಿಸ್ಟರ ಕೈಲಿ ಸಿಕ್ಕಿಹಾಕಿಕೊಂಡಿವೆ. ಅಲ್ಲಿ ಸಾಮಾನ್ಯ ಜನರ ಧ್ವನಿಯು ಕ್ಷೀಣವಾಗಿ ಕೇಳಿಸುವುದೂ ಸಹ ಕಷ್ಟಕರವಾಗಿದೆ. ನಮ್ಮ ದೇಶದ ಭಾಗಗಳೇ ಆಗಿದ್ದ ಬಾಂಗ್ಲಾದೇಶ – ಪಾಕೀಸ್ಥಾನ ಮುಂತಾದವುಗಳ ಪಾಡು ನೋಡಿದಾಗ, ನಮ್ಮಲ್ಲಿ ಜನತಂತ್ರ ಉಳಿದಿರುವುದರ ಹಿನ್ನೆಲೆಯಲ್ಲಿ ನಮ್ಮ  ಪರಂಪರೆಯ ಸತ್ತ್ವ ಗುಣಲಕ್ಷಣಗಳೇ ಪ್ರಧಾನವಾಗಿ ಕಾಣುತ್ತವೆ. 



Viewing all articles
Browse latest Browse all 3435

Trending Articles



<script src="https://jsc.adskeeper.com/r/s/rssing.com.1596347.js" async> </script>