Quantcast
Channel: Samvada
Viewing all articles
Browse latest Browse all 3435

ಬೇಕಿದೆ ಬಾಳಿಗೊಂದು ಭರವಸೆ !

$
0
0

ಕೊರೋನಾ ವೈರಾಣುವು ಎರಡನೇ ಅಲೆಯಲ್ಲಿ ತನ್ನ ಭೀಕರತೆಯನ್ನು ಹೆಚ್ಚಾಗಿಸಿದೆ. ಸೋಂಕು ಪೀಡಿತರ ಮರಣದ ಸಂಖ್ಯೆಯೂ ಹೆಚ್ಚಾಗಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಆಕ್ಸಿಜನ್‌ ಕೊರತೆ, ವೆಂಟಿಲೇಟರ್‌ ಕೊರತೆ, ಐಸಿಯು ಬೆಡ್‌ಗಳ ಕೊರತೆ ಕಂಡು ಬರುತ್ತಿದೆ. ಕೊರತೆಯೆಂಬುದು ಭ್ರಷ್ಟರು ಮಾಡಿದ ಕೃತಕ ಸೃಷ್ಟಿಯೋ ಅಥವಾ ನಿಜವೋ ಹೇಗೆ ಆಗಿದ್ದರೂ ಜನಸಾಮಾನ್ಯರಂತೂ ಸೂಕ್ತ ಚಿಕಿತ್ಸೆಗೆಂದು ಒದ್ದಾಡುತ್ತಿದ್ದಾರೆ.  ಒಂದು ವೇಳೆ ಸಂಪನ್ಮೂಲದಲ್ಲಿ ಕೊರತೆ ಇಲ್ಲ ಎಂದಾದರೆ ಅವುಗಳ ನಿರ್ವಹಣೆಯಲ್ಲಿ, ಸಂವಹನದಲ್ಲಿ ಕೊರತೆ ಇದೆಯೆಂಬುದು ಎದ್ದು ಕಾಣುವ ಸಂಗತಿ. ಇದು ಬೆದರಿದವರ ಮೇಲೆ ಕಲ್ಲೆಸೆದರು ಎಂಬಂತೆ ಚಿಕಿತ್ಸೆಗಾಗಿ ಅಲೆದಾಡುವವರಲ್ಲಿ ಮತ್ತಷ್ಟು ಭೀತಿಯನ್ನು ಹುಟ್ಟಿಸುತ್ತಿದೆ.

ಈಗಿನ ಜನರು ಇಂತಹ ಸಾಂಕ್ರಾಮಿಕ ರೋಗವನ್ನು ಈ ಹಿಂದೆ ತಮ್ಮ ಜೀವನದಲ್ಲಿ ಕಂಡಿರಲಿಕ್ಕಿಲ್ಲ. ಪ್ಲೇಗು, ಕಾಲರಾ, ಸಿಡುಬು ಇತ್ಯಾದಿಗಳ ಬಗ್ಗೆ ಕೇಳಿದ್ದರೂ ಅವು ಸ್ವಾತಂತ್ರ್ಯಪೂರ್ವ ಅಥವಾ ಬಹು ಹಳೆಯ ಸಂಗತಿಗಳಾಗಿ ಕತೆ, ಕಾದಂಬರಿಗಳಲ್ಲಿ ಮಾತ್ರ ಉಲ್ಲೇಖಿತ ವಿಷಯಗಳಾಗಿವೆ. ಹೀಗಾಗಿ ಕೊರೊನಾ ಪೆಟ್ಟಿಗೆ ಜನ ಆಘಾತಕ್ಕೆ ಒಳಗಾಗುತ್ತಿದ್ದಾರೆ. ಬರೇ ಮಾಹಿತಿ ಅಥವಾ ನ್ಯೂಸ್‌ ಆಗಿ ಟಿವಿಯ ಪರದೆಯಲ್ಲಿ, ವೃತ್ತಪತ್ರಿಕೆಗಳಲ್ಲಿ ಕಾಣುತ್ತಿದ್ದ ಸಂಗತಿಗಳು ತಮ್ಮ ಮನೆಯಲ್ಲೇ ಕಾಣುಬಹುದೆಂಬ ಕಲ್ಪನೆಯೇ ಹಲವರಿಗೆ ಇರಲಿಲ್ಲ. ತಾವೇ ಅಥವಾ ತಮ್ಮ ಕುಟುಂಬದವರೇ ಕೊವಿಡ್‌ ಸೋಂಕಿಗೆ ಒಳಗಾಗಿರುವುದನ್ನು ಜೀರ್ಣಿಸಿಕೊಳ್ಳಲು ಇಂತಹವರಿಗೆ ಸಾಧ್ಯವಾಗುತ್ತಿಲ್ಲ.

ಮಾನವೀಯತೆಯ, ಅಮಾನವೀತೆಯ ಎಲ್ಲದರ ಚಿತ್ರಣಗಳನ್ನೂ ಈ ರೋಗಸಂಕಷ್ಟ ತೆರೆದಿಟ್ಟು ಬಿಟ್ಟಿದೆ. ರಸ್ತೆಯಲ್ಲಿ ಯುವಕನೊಬ್ಬ ಗಂಟಲು ನೋವಿನಿಂದ ಬಿದ್ದು ಒದ್ದಾಡುತ್ತಿದ್ದರೂ ಕೊರೊನಾ ಭಯದಿಂದ ಹತ್ತಿರ ಸುಳಿಯದೇ ಜನರೆದುರೇ ಆತ ಒದ್ದಾಡುತ್ತಾ ಸತ್ತದ್ದಿದೆ. ಅಸಹಾಯಕ ಪತ್ನಿ, ಸೋಂಕಿತ ಗಂಡನನ್ನು ಮನೆಗೆ ಕರೆತರುತ್ತಿದ್ದಾಗ ರಸ್ತೆಯಲ್ಲಿಯೇ ಅಡ್ಡಗಟ್ಟಿ ಅವರಿಬ್ಬರನ್ನೂ ಗ್ರಾಮದಿಂದ ಹೊರಹಾಕಿ ಬೀದಿಪಾಲು ಮಾಡಿದ ಕ್ರೌರ್ಯವಿದೆ. ಇಂತಹ ಪ್ರಸಂಗಗಳು ಅನೇಕವಿದೆ.

ಅಮ್ಮನಿಗೆ ಕೋವಿಡ್‌ ಬಂದು ಜಿಲ್ಲಾಸ್ಪತ್ರೆಯಲ್ಲಿ ಒದ್ದಾಡುತ್ತಿರುವುದನ್ನು ಕಂಡು ಮನನೊಂದ ಯುವಕ ಅದೇ ಆಸ್ಪತ್ರೆಯಲ್ಲಿ ನೇಣಿಗೆ ಶರಣಾದ ವರದಿಯಿದೆ. ಗಂಡನಿಗೆ ಕೋವಿಡ್‌ ಬಂತೆಂದು ಹೆಂಡತಿ ನದಿಗೆ ಹಾರಿದ್ದು, ಹೆಂಡತಿಗೆ ಕೊರೊನಾ ತಗುಲಿತೆಂದು ಗಂಡ ಹಗ್ಗಕ್ಕೆ ನೇತಾಡಿದ ಸುದ್ದಿಗಳು ಪತ್ರಿಕೆಗಳಲ್ಲಿವೆ. ಅಷ್ಟೇ ಏಕೆ ಸ್ವತಃ ಕೊರೊನಾ ಸೋಂಕಿತರೇ ಇನ್ನು ನಮ್ಮ ಜೀವನ ಮುಗಿಯಿತು, ಆಸ್ಪತ್ರೆಯಲ್ಲಿ ಒದ್ದಾಡುವುದೇಕೆ ಎಂದು ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಇವು ಪ್ರಜ್ಞಾವಂತ, ನಾಗರಿಕ ಸಮಾಜದ ಮನ ಚುಚ್ಚುವಂತಹ ಸಂಗತಿಗಳು.

ಇವೆಲ್ಲವೂ ಮನಸ್ಸಿನ ದೃಢತೆಯನ್ನು ಪರೀಕ್ಷಿಸುವ ಸಮಯಗಳು. ಆತುರದ ತೀರ್ಮಾನ, ಗುಂಪುಗೂಡಿದ ಜನ ಗೊಂದಲದ ಮನಸ್ಥಿತಿಯಲ್ಲಿ ಕೈಗೊಂಡ ನಿಲುವುಗಳು ಅನೇಕ ಜೀವಗಳಿಗೇ ಕುತ್ತು ತಂದಿವೆ. ಕೆಲ ಬಾರಿ ಕೊವಿಡ್‌ ಟೆಸ್ಟ್‌ ಫಲಿತಾಂಶವೇ ತಪ್ಪಾಗಿರುವ ಸಾಧ್ಯತೆಗಳಿವೆ. ಒಂದು ಪರೀಕ್ಷಾಕೇಂದ್ರ ಒಬ್ಬಾತನಿಗೆ ಕೊವಿಡ್‌ ಇದೆ ಎಂದು ಪಾಸಿಟಿವ್‌ ವರದಿ ನೀಡಿದ್ದರೆ, ಯಾವುದೇ ಚಿಕಿತ್ಸೆ ಪಡೆಯದೇ ಇನ್ನೊಂದು ಪರೀಕ್ಷಾ ಕೇಂದ್ರದಲ್ಲಿ ಸ್ವಾಬ್‌ ಟೆಸ್ಟ್ ಮಾಡಿಸಿದಾಗ ಕೊವಿಡ್‌ ನೆಗೆಟಿವ್‌ ಫಲಿತಾಂಶ ಬಂದ ಪ್ರಸಂಗಗಳಿವೆ.ಇಂತಹ ಪರಿಸ್ಥಿತಿಯಲ್ಲಿ ಆತುರದ ಕೈಗೆ ಬುದ್ಧಿಕೊಟ್ಟವರದು ದುರಂತ ಕತೆ.

ನಮ್ಮ ಜನ ಈಗ ನಿಜವಾಗಿ ಹೊಂದಬೇಕಾದದ್ದು ವಿವೇಚನೆ ಮತ್ತು ಆತ್ಮಸಂಯಮಗಳೆಂಬ ಶಕ್ತಿಗಳನ್ನು. ಆದರೆ ಸಮೂಹ ಮಾಧ್ಯಮಗಳು ಜವಾಬ್ದಾರಿ ಮರೆತು ಜಾಗೃತಿಗಿಂತ ಹೆಚ್ಚಾಗಿ ಭೀತಿ ಮೂಡಿಸುವ ಚಿತ್ರಣಗಳನ್ನು ಜನರ ಮುಂದಿಡುತ್ತಿವೆ. ಅದಕ್ಕೆ ಕಾರಣ ಟಿ ಆರ್ ಪಿಯೋ ಅಥವಾ‌ ಮತ್ತೊಂದೋ ಗೊತ್ತಿಲ್ಲ. ಆದರೆ ನಿರಂತರವಾಗಿ ಸಾವುನೋವು, ದುಗುಡ ದೊಂಬಿಗಳ ವಾರ್ತೆಗಳನ್ನೇ ಕೇಳುವ, ನೋಡುವ ಬಹುತೇಕ ಜನರು ಸಾಮಾನ್ಯ ಯೋಚನಾ ಶಕ್ತಿಯನ್ನೂ ಕಳೆದುಕೊಳ್ಳುವ ಹಂತಕ್ಕೆ ಬಂದು ತಲುಪಿಬಿಟ್ಟಿದ್ದಾರೇನೋ ಎನಿಸುತ್ತಿದೆ. ಸತ್ತವರ ಹೆಣಸುಡುವ, ಸಂಬಂಧಿಕರು ಗೋಳಾಡುವ ದೃಶ್ಯಗಳನ್ನೇ ಪದೇ ಪದೇ ತೋರಿಸುವುದು, ವೀಕ್ಷಿಸುವುದು ಜನರ ಮನೋಧೈರ್ಯವನ್ನೇ ಉಡುಗಿಸಿ ಭಯವನ್ನು ಮೂಡಿಸುವ ಕೆಲಸ ಮಾಡುತ್ತಿದೆ. 

ಸೋಂಕಿದ್ದರೂ ಅದು ಉಲ್ಪಣಿಸಲು ಅಥವಾ ನಿರ್ಮೂಲನಗೊಳ್ಳಲು ಮನಸ್ಸಿನ ಶಕ್ತಿ ಬಹಳ ದೊಡ್ಡ ಪಾತ್ರವಹಿಸುತ್ತದೆ. ಮಾನಸಿಕವಾಗಿ ಆರೋಗ್ಯವನ್ನು ರೂಢಿಸಿಕೊಂಡರೆ ಅದರ ಪ್ರತಿಫಲನ ದೈಹಿಕವಾಗಿಯೂ ಆಗುವುದು ಖಂಡಿತ ಸತ್ಯ. ಆರೋಗ್ಯಕರ ಜೀವನ ಪದ್ಧತಿಯ ಜೊತೆಗೆ ಆರೋಗ್ಯಕರ ವಿಚಾರ ಪದ್ಧತಿಯನ್ನೂ ರೂಢಿಸಿಕೊಳ್ಳಬೇಕಾದ ಅವಶ್ಯಕತೆಯಿದೆ. ಋಣಾತ್ಮಕ ಚಿಂತನೆಗಳು ಮನಸ್ಸನ್ನು ಆಕ್ರಮಿಕೊಳ್ಳಲು ಎಂದಿಗೂ ಅವಕಾಶ ಕೊಡಬಾರದು.

ಕೊರೊನಾ ಪೀಡಿತನೊಬ್ಬ ಸತ್ತದ್ದನ್ನು ನೋಡಿದೆವೆಂದ ಮಾತ್ರಕ್ಕೆ ನಾವು ಸಹ ಹಾಗೆಯೇ ಸಾಯುತ್ತೇವೆಂದು ಭಾವಿಸುವ ಅಗತ್ಯವಿಲ್ಲ. ಲಕ್ಷಾಂತರ ಜನ ಆ ಸೋಂಕಿಗೆ ಒಳಗಾದರೂ ವೈದ್ಯರ ಸೂಕ್ತ ಚಿಕಿತ್ಸೆಯಿಂದ ಅಥವಾ ಮನೆಯಲ್ಲಿಯೇ ಇದ್ದು ಸೇವಿಸಿದ ಔಷಧಿ ಹಾಗೂ ಮಾಡಿಕೊಂಡ ಮನೆಮದ್ದಿನಿಂದ ಈಗ ಆರೋಗ್ಯವಾಗಿ ಇರುವುದನ್ನು ಸಹ ಗಮನಿಸಬೇಕು. ಈ ನಿಟ್ಟಿನಲ್ಲಿ ಇಂತಹ ಕೊವಿಡ್‌ ಸೋಂಕಿನ ರೋಗಿಗಳಿಗೆ ಸೂಕ್ತ ಸಲಹೆಗಳ ಮೂಲಕ ಮಾನಸಿಕ ಆರೋಗ್ಯವನ್ನು ನೀಡಿ ಧೈರ್ಯ ತುಂಬುವ ಪ್ರಯತ್ನಗಳಿಗೆ ಅನೇಕರು ಕೈ ಹಾಕಿರುವ ಶ್ಲಾಘನೀಯ ಕಾರ್ಯವೂ ಕಂಡು ಬರುತ್ತಿದೆ. 

ಇಂದಿನ ಈ ಸಮೂಹ ಸನ್ನಿಯಂತಹ ಕಾಲದಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ, ಮನೋಲ್ಲಾಸವನ್ನು ವೃದ್ಧಿಸುವ ವಿಚಾರ ವ್ಯವಹಾರಗಳಲ್ಲಿ ನಿರತರಾಗಬೇಕು. ʼಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದಿರಲಿʼ ಎಂಬ ನಂಬಿಕೆ ಹೇಗೆ ಆಸ್ತಿಕನಿಗೆ ಅಪರಿಮಿತ ವಿಶ್ವಾಸವನ್ನು ತುಂಬುತ್ತದೆಯೋ ಹಾಗೆಯೇ ನಮಗೆ ಒಳಿತೇ ಆಗುತ್ತದೆ ಎಂಬ ದೃಢವಿಶ್ವಾಸವೂ ಮುಂದಿನ ಬಾಳಿಗೆ ಭರವಸೆಯನ್ನು ತುಂಬಿ ಬದುಕನ್ನು ಮುನ್ನೆಸುವ ಇಂಧನವಾಗುತ್ತದೆ.


Viewing all articles
Browse latest Browse all 3435

Trending Articles



<script src="https://jsc.adskeeper.com/r/s/rssing.com.1596347.js" async> </script>