
ಜಮ್ಮುವಿನಲ್ಲಿ ದೇವಸ್ಥಾನ ನಿರ್ಮಾಣಕ್ಕೆ ತಿರುಪತಿ ದೇವಸ್ಥಾನ ಮಂಡಳಿಗೆ ಜಮ್ಮು-ಕಾಶ್ಮೀರ ಸರ್ಕಾರ ಭೂಮಿ ಮಂಜೂರು ಮಾಡಿದೆ.
ಏಪ್ರಿಲ್ 1ರಂದು ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ದೇವಾಲಯ ನಿರ್ಮಾಣಕ್ಕೆ ತಿಮ್ಮಪ್ಪ ದೇವಾಲಯದ ಆಡಳಿತ ಮಂಡಳಿ ‘ತಿರುಮಲ ತಿರುಪತಿ ದೇವಸ್ಥಾನಂ’ (ಟಿಟಿಡಿ) ಗುತ್ತಿಗೆ ಆಧಾರದ ಮೇಲೆ ಭೂಮಿ ನೀಡುವ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ.
ಈ ಮೂಲಕ ದೇವಾಲಯ ಮತ್ತು ಸಂಬಂಧಿತ ಮೂಲಸೌಕರ್ಯಗಳನ್ನು ನಿರ್ಮಿಸಲು ಜಮ್ಮು ಮತ್ತು ಕಾಶ್ಮೀರದಲ್ಲಿ 40 ವರ್ಷಗಳ ಅವಧಿಗೆ ಸುಮಾರು 25 ಹೆಕ್ಟೇರ್ ಭೂಮಿಯನ್ನು ಟಿಟಿಡಿ ಪಡೆದಿದೆ.
496 ಕನಾಲ್ ಜಾಗದಲ್ಲಿ ದೇವಸ್ಥಾನದೊಂದಿಗೆ ಯಾತ್ರಿಗಳ ಭವನ, ವೇದ ಪಾಠಶಾಲೆ, ಆಧ್ಯಾತ್ಮಿಕ ಹಾಗೂ ಧ್ಯಾನ ಕೇಂದ್ರ, ಕಚೇರಿ, ವಸತಿ ನಿಲಯ, ಪಾರ್ಕಿಂಗ್ ನಿರ್ಮಾಣ ಮಾಡಲು ಟಿಡಿಪಿ ಯೋಜನೆ ರೂಪಿಸಿದೆ.
ಆರ್ಥಿಕ ಚಟುವಟಿಕೆಗಳ ಜೊತೆಗೆ ಜಮ್ಮು ಕಾಶ್ಮೀರದಲ್ಲಿ ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದೊಂದಿಗೆ ದೇಗುಲ ನಿರ್ಮಾಣವಾಗಲಿದ್ದು, ಒಮ್ಮೆ ಈ ದೇಗುಲ ಅಭಿವೃದ್ಧಿಯಾದರೆ, ಮಾತಾ ವೈಷ್ಣೋದೇವಿ, ಅಮರನಾಥ ದೇಗುಲದ ಜೊತೆಗೆ ಈ ದೇಗುಲವೂ ಧಾರ್ಮಿಕ ಕೇಂದ್ರವಾಗಲಿದೆ