ಬೆಂಗಳೂರು, ೨೭ ಡಿಸೆಂಬರ್ ೨೦೧೮: ಹೊಸ ವರ್ಷದ ಸಂಭ್ರಮಾಚರಣೆಯ ಹೆಸರಿನಲ್ಲಿ ನಡೆಯುವ ಮಾದಕತೆ, ಅಶ್ಲೀಲತೆಯ ಕುರಿತಾಗಿ ಇಂದು ಭಜರಂಗ ದಳ ಪತ್ರಿಕಾ ಗೋಷ್ಠಿಯನ್ನು ನಗರದ ಧರ್ಮಶ್ರೀ ಕಾರ್ಯಾಲಯದಲ್ಲಿ ಆಯೋಜಿಸಿತ್ತು. ಪತ್ರಿಕಾ ಗೋಷ್ಠಿಯಲ್ಲಿ ಭಜರಂಗ ದಳದ ರಾಷ್ಟ್ರೀಯ ಸಹ ಸಂಯೋಜಕರಾದ ಶ್ರೀ ಸೂರ್ಯನಾರಾಯಣ ರವರು ಉಪಸ್ಥಿತರಿದ್ದರು. ಪತ್ರಿಕಾ ಪ್ರಕಟಣೆಯ ಮುಖ್ಯ ಅಂಶಗಳು ಇಂತಿವೆ:
೧. ಭಾರತೀಯರಿಗೆ ಯುಗಾದಿಯು ಹೊಸ ವರ್ಷವಾಗಿದೆ. ಅದೇ ರೀತಿ ಬೇರೆ ಬೇರೆ ದೇಶಗಳಿಗೆ ಅವರದೇ ಪ್ರತ್ಯೇಕ ಹೊಸ ವರ್ಷ ಆಚರಣೆ ಇದೆ, ಭಾರತ ಹಿಂದು ಬಹು ಸಂಖ್ಯಾತ ದೇಶವಾಗಿದ್ದು ನಮಗೆ ಯುಗಾದಿ ಹೊಸ ವರ್ಷವಾಗಿದೆ. ಆದ್ದರಿಂದ ಈ ಹೊಸ ವರ್ಷ ಅರ್ಥಹೀನವಾಗಿದೆ.
೨. ಇಂತಹ ಆಚರಣೆಗಳ ಹಿಂದೆ ಡ್ರಗ್ ಮಾಫಿಯಾ, ಲಿಕ್ಕರ್ ಮಾಫಿಯಾ ಮತ್ತು ದೊಡ್ಡ ದೊಡ್ಡ ವ್ಯಾಪಾರ ಉದ್ಯಮಗಳ ಕೈವಾಡವಿದೆ.
೩. ಈ ರೀತಿಯ ಅಸಭ್ಯ ಅಶ್ಲೀಲವಾಗಿ ನಡೆಯುವ ಹೊಸವರ್ಷ ಆಚರಣೆಯನ್ನು ಬಜರಂಗದಳ ಖಂಡಿಸುತ್ತದೆ.
೪. ಇಂತಹ ಆಚರಣೆಗಳಿಗೆ ಯಾವುದೇ ಪ್ರಾಧ್ಯಾನತೆಯಾಗಲಿ, ಪವಿತ್ರತೆಯಾಗಲಿ, ಉದ್ದೇಶವಾಗಲಿ ಇಲ್ಲ. ಇಂತಹ ಆಚರಣೆಗಳು ಭಾರತೀಯ ಯುವ ಜನತೆಯನ್ನು ದಾರಿ ತಪ್ಪಿಸುವುದರಲ್ಲಿ ಸಂಶಯವಿಲ್ಲ.
೫. ಡ್ರಗ್ಸ್ ಮಾಫಿಯಾ ಇಡೀ ದೇಶದ ಪ್ರಮುಖ ಪಟ್ಟಣಗಳಲ್ಲಿ, ದೇಶದ ಎಲ್ಲಾ ಯೂನಿವರ್ಸಿಟಿಗಳ ಕ್ಯಾಂಪಸ್‌ಗಳ ಸುತ್ತ ಕಾರ್ಯನಿರ್ವಹಿಸುತ್ತಿದ್ದು, ಲಕ್ಷಾಂತರ ಯುವಕರನ್ನು ದಾರಿ ತಪ್ಪಿಸುತ್ತಿದೆ. ಅವರದೇ ಕೈವಾಡ ಈ ಹೊಸವರ್ಷದ ಆಚರಣೆ ಹಿಂದೆ
ಅಡಗಿರಬಹುದು.
೬. ಗಾಂಧಿ ಜಯಂತಿಯಂದು ಹೇಗೆ ಮದ್ಯಪಾನ ಅಂಗಡಿ ಮುಚ್ಚಿಸುತ್ತಾರೋ ಅದೇ ರೀತಿ ಡಿಸೆಂಬರ್ ೩೧ರ ರಾತ್ರಿಯೂ ಮದ್ಯಪಾನ ಹಾಗೂ ಹುಕ್ಕಾ ಬಾರ್‌ಗಳನ್ನು ಮುಚ್ಚಿಸಬೇಕು. ಇದರಿಂದ ಅಪರಾಧ, ಲೈಂಗಿಕ ಕಿರುಕುಳ, ಆಕ್ಸಿಡೆಂಟ್‌ಗಳು ಕಡಿಮೆಯಾಗಬಹುದು.
೭. ಹಿಂದು ಹಬ್ಬಗಳ ಆಚರಣೆಗೆ ನೂರಾರು ಕಾನೂನುಗಳನ್ನು ಹೇರುವ ಸರ್ಕಾರ ಮೋಜು ಮಸ್ತಿ ಅನೈತಿಕತೆಯಲ್ಲಿ ತೊಡಗುವ ಪಾಶ್ಚಾತ್ಯ ಆಚರಣೆಗೆ ಸರ್ಕಾರವೇ ಪೊಲೀಸ್ ರಕ್ಷಣೆಯೊಂದಿಗೆ ಅವಕಾಶ ಮಾಡಿಕೊಡುತ್ತಿರುವುದು ಹಾಸ್ಯಾಸ್ಪದ.
೮. ಶಬ್ದ ಮಾಲಿನ್ಯದ ಹೆಸರಿನಲ್ಲಿ ದೇವಸ್ಥಾನ, ಕಲ್ಯಾಣ ಮಂಟಪಗಳಿಗೆ ನೋಟಿಸ್ ಕೊಡುವ ವಾಯುಮಾಲಿನ್ಯ ಇಲಾಖೆ ರಾತ್ರಿಯಿಡಿ ಡಿ.ಜೆಗೆ ಅವಕಾಶ ಕೊಡುವುದು ಖಂಡನೀಯ.
೯. ಅದೇ ರೀತಿ ಸುಪ್ರೀಮ್ ಕೋರ್ಟ್ ಅದೇಶವಿದ್ದರೂ ರಾತ್ರಿ ೧೦.೦೦ ರ ಮೇಲೆ ಡಿ.ಜೆಗೆ ಪೊಲೀಸ್ ಕಮೀಷನರ್ ಅವಕಾಶ ಕೊಡುವುದು ಸರಿಯಲ್ಲ.
೧೦. ಭಾರತೀಯ ಸಂಸ್ಕೃತಿಯು ಅತ್ಯಂತ ಪವಿತ್ರವಾಗಿದೆ, ಈ ತರಹದ ಹೊಸ ವರ್ಷದ ಆಚರಣೆಯು ಹಿಂದು ಜೀವನ ಪದ್ಧತಿಗೆ ಮಾರಕವಾಗಿದೆ.
ಈ ರೀತಿಯ ಅಶ್ಲೀಲ, ಅಸಭ್ಯ ಆಚರಣೆಗಳು ಎಲ್ಲೇ ಕಂಡು ಬಂದರೂ ಬಜರಂಗದಳ ಕಾನೂನಿನ ಚೌಕಟ್ಟಿನಲ್ಲಿ ಪೊಲೀಸರ ಸಹಕಾರದಿಂದ ತಡೆಯಲಾಗುತ್ತದೆ.

Sri Suryanarayan addressing the media at Dharmashri